ಕುಂದಾಪುರ,ಜ.10 (DaijiworldNews/AK): ಸೈನಿಕರೆಂದರೆ ಅವರ ಮನೆಯವರಿಗೆ ಮಾತ್ರ ಮಕ್ಕಳಲ್ಲ. ಇಡೀ ದೇಶದ ಅಷ್ಟೂ ಕುಟುಂಬಗಳ ಸದಸ್ಯರು. ಅವರಿಗೆ ಎಲ್ಲ ಭಾರತೀಯರ ನೈತಿಕ ಬೆಂಬಲದ ಅಗತ್ಯವಿರುತ್ತದೆ ಎಂದು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಹೇಳಿದರು.

ಕುಂದಾಪುರದ ನಾರಾಯಣ ಗುರು ಸಭಾಭವನದಲ್ಲಿ ಇತ್ತೀಚಿಗೆ ಪೂಂಛನಲ್ಲಿ ಮಡಿದ ಯೋಧ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ ನುಡಿನಮನದಲ್ಲಿ ಅವರು ಮಾತನಾಡಿದರು. ದೇಶ ಕಾಯುವ ಸೈನಿಕ ಮನೆಯಿಂದ ಹೊರಹೋದಾಗ ಅವರ ಮನೆಯಲ್ಲಿ ಇರುವ ಮಡುಗಟ್ಟಿದ ಆತಂಕ ಊಹನೆಗೂ ನಿಲುಕದ್ದು. ಸೈನಿಕನ ಮರಣ ಅದು ನಮ್ಮೆಲ್ಲರಿಗೆ ಜೀವದಾನಕ್ಕೆ ಮಾಡಿದ ಬಲಿದಾನವಾಗಿರುತ್ತದೆ. ದೇಶಭಕ್ತಿ ಪ್ರತಿಯೊಬ್ಬರಲ್ಲೂ ಧಮನಿ ಧಮನಿಗಳಲ್ಲಿ ಹರಿಯಬೇಕು. ಅದು ಯಾವುದೇ ರೂಪದಲ್ಲಿ ಇರಬಹುದು. ಆದರೆ ದೇಶಕ್ಕಾಗಿ ಮನಸ್ಸು ತುಡಿಯುತ್ತಿರಬೇಕು ಎಂದರು.
ಬೆಳಗಾವಿ ವರೆಗೆ ಪಾರ್ಥಿವ ಶರೀರ ಮಿಲಿಟರಿ ವಿಮಾನದಲ್ಲಿ ಬರುತ್ತದೆ. ನಂತರ ರಸ್ತೆ ಮೂಲಕ ತರಬೇಕು ಎಂಬ ಮಾಹಿತಿ ಬಂದಿತ್ತು. ಸಂಸದರ, ಮಾಜಿ ಸಂಸದರ ಪ್ರಯತ್ನದಿಂದ ಮಂಗಳೂರುವರೆಗೆ ತಲುಪುವಂತಾಯಿತು. ಬಳಿಕ ಊರಿನ ಸಂಘ ಸಂಸ್ಥೆಗಳ ನೆರವಿನಿಂದ ಶ್ರದ್ದೆಯ ಗೌರವಾರ್ಪಣೆ ನಡೆದಿದೆ. ಭಾರತೀಯ ಸೇನೆಯಲ್ಲಿ ಸೇವೆ ಮಾಡಿ ಮಿಂಚಿ ಮರೆಯಾದವರಿಗೆ ಸೂಕ್ತ ಗೌರವ ಸಲ್ಲಿಸಿದರೆ ದೇಶಸೇವೆಗೆ ಹೊರಡುವವರಿಗೆ ಒಂದು ಹೆಮ್ಮೆ ಇರುತ್ತದೆ. ಬೀಜಾಡಿಯಲ್ಲಿ ಯೋಧನ ಸ್ಮಾರಕ ನಡೆಯಲಿದೆ ಎಂದರು.
ನಿರ್ಮಾಣ ನಂತರ ಯೋಧನ ಮನೆಯವರಿಗೆ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಸಹಾಯ ಧನವನ್ನು ವಿತರಣೆ ಮಾಡಿ. ಅನೂಪ್ ಅವರ ತಾಯಿ ಚಂದು ಪೂಜಾರ್ತಿ, ಸಹೋದರ ಶಿವರಾಮ್, ನಾರಾಯಣ ಗುರು ಮಹಿಳಾ ಮಂಡಲ ಅಧ್ಯಕ್ಷೆ ಗಿರಿಜಾ ಮಾಣಿಗೋಪಾಲ್, ಯುವಕ ಮಂಡಲ ಅಧ್ಯಕ್ಷ ಸಂದೇಶ್ ಪೂಜಾರಿ ಬೀಜಾಡಿ, ವಿನಯ ಬನ್ನಾಡಿ, ದಿನಕರ ಪೂಜಾರಿ ಉಳ್ಳೂರು 74, ಭಾಸ್ಕರ ಬಿಲ್ಲವ ಗೌರವಾರ್ಪಣೆ ಮಾಡಿದರು. ರಾಜೇಶ್ ಕಡ್ಡಿಮನೆ ನಿರ್ವಹಿಸಿದರು.