ಉಡುಪಿ,ಜ.10 (DaijiworldNews/AK): ರಾಜ್ಯದ ಮುಖ್ಯಮಂತ್ರಿಗಳ ವಿರುದ್ದ ಸುನೀಲ್ ಕುಮಾರ್ ಅವರು ಬಳಸಿರುವ ಪದಕ್ಕೆ ಕೂಡಲೇ ಕ್ಷಮೆ ಕೇಳಬೇಕು. ಶರಣಾಗಿರುವ ನಕ್ಸಲರು . ಮುಂದಿನ ದಿನಗಳಲ್ಲಿ ಇವರೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಬದುಕನ್ನು ಕಳೆಯಲು ಸರಕಾರ ಪ್ಯಾಕೇಜ್ ಘೋಷಿಸಿದೆ ವಿನಹ ಯಾವುದೇ ಮೋಜು ಮಸ್ತಿ ಮಾಡಲು ಅಲ್ಲ” ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂಸೆಯನ್ನು ಕೈಬಿಟ್ಟು ಶರಣಾದ ನಕ್ಸಲರನ್ನು ಸಮಾಜದ ಮುಖ್ಯವಾಹಿನಿ ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅರ್ಬನ್ ನಕ್ಸಲರ ಕೋರ್ ಕಮಿಟಿ ಸದಸ್ಯರಾಗಿದ್ದಾರೆ ಎಂದು ಹೇಳಿರುವ ಕಾರ್ಕಳ ಶಾಸಕರು ಹಾಗೂ ಮಾಜಿ ಸಚಿವರೂ ಆಗಿರುವ ವಿ ಸುನೀಲ್ ಕುಮಾರ್ ಅವರ ಶೋಚನೀಯ ಮನಸ್ಥಿತಿಗೆ ಧಿಕ್ಕಾರವಿದೆ.
ಸುನೀಲ್ ಕುಮಾರ್ ಅವರು ಅವರದ್ದೇ ಆಡಳಿತದ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಕಳೆದ ತಿಂಗಳು ಛತ್ತೀಸ್ಘಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಖುದ್ದಾಗಿ ಬರಮಾಡಿಕೊಂಡು ಆನಂದಬಾಷ್ಪ ಸುರಿಸಿದ್ದರು. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್ ದಂಪತಿಗೆ ಅಲ್ಲಿನ ಬಿಜೆಪಿ ಸರ್ಕಾರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 41 ಲಕ್ಷ ರೂಪಾಯಿಗಳ ನೆರವು ನೀಡಿರುತ್ತಾರೆ ಹಾಗಿದ್ದರೆ ಅವರಿಬ್ಬರನ್ನೂ ಕೂಡ ಸಿದ್ದರಾಮಯ್ಯರಿಗೆ ಕರೆದಂತೆ ಕರೆಯುವ ಧಮ್ಮು ತಾಕತ್ತು ಸುನೀಲ್ ಕುಮಾರ್ ಅವರಿಗೆ ಯಾಕಿಲ್ಲ? ಅಥವಾ ಅಲ್ಲಿ ಅಷ್ಟೊಂದು ನಕ್ಸಲರು ಶರಣಾದ ವೇಳೆ ಯಾಕೆ ಬೆಚ್ಚಿ ಬಿದ್ದಿಲ್ಲ? ಶಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇಲ್ಲದೇ ಹೋಯಿತೆ?
ಸದಾ ಹಿಂಸೆಯನ್ನೇ ಬೆಂಬಲಿಸಿಕೊಂಡು ಬಂದಿರುವ ಬಿಜೆಪಿಗರಿಗೆ ಹಿಂಸಾ ಮಾರ್ಗವನ್ನು ತ್ಯಜಿಸಿ ಶಾಂತಿಯ ಮಾರ್ಗದತ್ತ ಬರುವ ನಿರ್ಧಾರ ಮಾಡಿಕೊಂಡ ನಕ್ಸಲರ ನಿರ್ಧಾರವನ್ನು ನಾಗರಿಕ ಸಮಾಜ ಗೌರವಯುತವಾಗಿ ಒಪ್ಪಿಕೊಂಡರೂ ಸುನೀಲ್ ಕುಮಾರ್ ಅವರಂತ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ವಿರೋಧಿಸುತ್ತಿರುವುದು ನಿಜಕ್ಕೂ ಕಳವಳಕಾರಿ.
ರಾಜ್ಯದ ಮುಖ್ಯಮಂತ್ರಿಯೋರ್ವರು ಹಿಂಸಾ ಮಾರ್ಗವನ್ನು ತ್ಯಜಿಸಿದವರನ್ನು ಸಮಾಜದ ಮುಖ್ಯವಾಹಿನಿಗೆ ಸ್ವಾಗತಿಸಿದ್ದೇ ದೊಡ್ಡ ಅಪರಾಧವೆಂಬಂತೆ ಅವರನ್ನು ಅರ್ಬನ್ ನಕ್ಸಲ್ ಎಂದು ಕರೆಯುತ್ತಿರುವುದು ಖಂಡನೀಯ.
ಶರಣಾಗಿರುವ ಈ ನಕ್ಸಲೀಯರ ಅನುಸರಿಸಿದ ಹಿಂಸಾಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಆದರೆ ಇವರು ಬಯಸಿದಂತೆ ಶರಣಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಬದಕಲು ಕೂಡ ಸಂವಿಧಾನದಲ್ಲಿ ಅವಕಾಶವಿದೆ ಎನ್ನುವುದು ಸುನೀಲ್ ಕುಮಾರ್ ಅವರು ಮರೆತಿರಬೇಕು. ದಾರಿ ತಪ್ಪಿ ಹಿಂಸೆಯ ಮಾರ್ಗ ಹಿಡಿದವರ ಮನವೊಲಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸಿ, ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತನೆ ಮಾಡುವುದು ಒಂದು ಸರ್ಕಾರದ ಕರ್ತವ್ಯವಾಗಿದೆ. ಇದೇ ಕರ್ತವ್ಯವನ್ನು ಸಿದ್ದರಾಮಯ್ಯ ಅವರು ಮಾಡಿದ್ದು ಅದನ್ನು ತಿರಸ್ಕಾರದ ದೃಷ್ಠಿಯಿಂದ ಕಾಣುವುದು ಬಿಜೆಪಿಗರ ಹಳೆ ಚಾಳಿಯಾಗಿದೆ.
ಶರಣಾಗಿರುವ ನಕ್ಸಲರು . ಮುಂದಿನ ದಿನಗಳಲ್ಲಿ ಇವರೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಬದುಕನ್ನು ಕಳೆಯಲು ಸರಕಾರ ಪ್ಯಾಕೇಜ್ ಘೋಷಿಸಿದೆ ವಿನಹ ಯಾವುದೇ ಮೋಜು ಮಸ್ತಿ ಮಾಡಲು ಅಲ್ಲ.
ರಾಜ್ಯದ ಮುಖ್ಯಮಂತ್ರಿಗಳ ವಿರುದ್ದ ಸುನೀಲ್ ಕುಮಾರ್ ಅವರು ಬಳಸಿರುವ ಪದಕ್ಕೆ ಕೂಡಲೇ ಕ್ಷಮೆ ಕೇಳಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.