ಬೆಳ್ತಂಗಡಿ, ಜ.10(DaijiworldNews/TA): ನಕ್ಸಲರು ತಮ್ಮ ಶಸ್ತ್ರ ತ್ಯಾಗ ಮಾಡಿ ಮುಖ್ಯವಾಹಿನಿಗೆ ಮರಳಿದರೆ ಬಿಜೆಪಿಗೇನು ಸಮಸ್ಯೆ ? ಗೋವುಗಳ ರಕ್ಷಣೆ ಹೆಸರಿನಲ್ಲಿ ಗೋಸಾಗಾಟಗಾರರನ್ನು ಹತ್ಯೆ ಮಾಡಿದವರನ್ನು ಹೂಮಾಲೆ ಹಾಕಿ ಸ್ವಾಗತಿಸುವ ಬಿಜೆಪಿಗರಿಗೆ ನಕ್ಸಲರು ಮುಖ್ಯವಾಹಿನಿಗೆ ಬರುವುದನ್ನು ಟೀಕಿಸಲು ಯಾವ ನೈತಿಕತೆ ಇದೆ ಎಂದು ಬೆಳ್ತಂಗಡಿಯ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕರಾದ ಶೇಖರ್ ಲಾಯಿಲ ಪ್ರಶ್ನಿಸಿದ್ದಾರೆ.

ಶರಣಾದ ನಕ್ಸಲರಿಗೆ ಸರ್ಕಾರ ಘೋಷಿಸಿರುವ ಪ್ಯಾಕೇಜ್ ವಿರುದ್ಧ ಟೀಕಿಸಿರುವ ಶಾಸಕರಾದ ಹರೀಶ್ ಪೂಂಜಾ ಹಾಗೂ ಸುನೀಲ್ ಕುಮಾರ್ ವಿರುದ್ಧ ಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರಾದ ಪೂಂಜಾ ಹಾಗೂ ಸುನೀಲ್ ಅವರಿಗೆ ಈ ದೇಶದ ಸಂವಿಧಾನದ ಮೇಲೆ ನಂಬಿಕೆ ಇರುತ್ತಿದ್ದರೆ ಈ ಮೊದಲು ಬಿಜೆಪಿ ಸರ್ಕಾರದ ಅಡಿಯಲ್ಲಿ ಅವರನ್ನು ಪ್ರಜಾಸತ್ತಾತ್ಮಕವಾಗಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿತ್ತು.
ತನ್ನ ಕ್ಷೇತ್ರದ ನಕ್ಸಲ್ ಸಿದ್ದಾಂತವಾದಿ ಸುಂದರಿ ಕುತ್ಲೂರು ಅವರನ್ನು ಪ್ರೀತಿಯಿಂದ ನಾಗರಿಕ ಸಮಾಜಕ್ಕೆ ಸ್ವಾಗತಿಸಬೇಕಾದ ಶಾಸಕ ಹರೀಶ್ ಪೂಂಜಾ ಅಜ್ಞಾನಿ , ಅವಿವೇಕಿಗಳಂತೆ ಮಾತನಾಡುತ್ತಾ ಪ್ರಚಾರ ಗಿಟ್ಟಿಸುವುದು ಸರಿಯಲ್ಲ ಎಂದು ಲಾಯಿಲ ಅವರು ತಿಳಿಸಿದ್ದಾರೆ.