ಮಂಗಳೂರು, ಜ.11 (DaijiworldNews/AA): ಎರಡು ದಿನಗಳ ಹಿಂದೆ 6 ಮಂದಿ ನಕ್ಸಲರ ಶರಣಾಗತಿಯ ಕುರಿತು ಸರಕಾರ ನಡೆದು ಕೊಂಡ ರೀತಿ ಸಂಶಯ ಮೂಡಿಸುತ್ತಿದೆ. ಈ ಹಿಂದೆ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಕೂಡ ಸಂಶಯ ಮೂಡಿಸುತ್ತಿದೆ ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಚಿಕ್ಕಮಂಗಳೂರು ಎಸ್ಪಿ ಆಗಿದ್ದ ಸಂದರ್ಭದಲ್ಲಿ ನಕ್ಸಲರು ಶರಣಾಗಿದ್ದರು. ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ನಾನು ಭಾಗವಹಿಸಿದ್ದೆ. ನಿಯಮಗಳ ಪ್ರಕಾರ ಜಿಲ್ಲಾಧಿಕಾರಿ ಮತ್ತು ಎಸ್ಪಿ ಎದುರು ನಕ್ಸಲರು ಶರಣಾಗಬೇಕು. ಆನಂತರ ಬೇರೆ ಪ್ರಕ್ರಿಯೆಗಳು ನಡೆಯುತ್ತೆ. ಆದರೆ ಇಲ್ಲಿ ರಾಜಕೀಯ ಮೈಲೇಜ್ ಗೋಸ್ಕರ ಶರಣಾಗತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಕಿಡಿಕಾರಿದರು.
ನಕ್ಸಲ್ ಬೆಂಬಲಿಗರು ಸರ್ಕಾರದ ಮೇಲೆ ಪ್ರಭಾವ ಬೀರಿದ್ದಾರೆ. ಇವರು ನಾಗರಿಕ ಸಮಾಜದ ಮೇಲೆ ಇವರು ಪ್ರಭಾವ ಬೀರಲಿದ್ದಾರೆ. ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ಆದರೆ ಮೊನ್ನೆ ನಡೆದ ನಕ್ಸಲರ ಶರಣಾಗತಿಯ ಬಗ್ಗೆ ಜನರಲ್ಲಿ ವಿಶ್ವಾಸವಿಲ್ಲ. ಅಷ್ಟು ಮಾತ್ರವಲ್ಲದೆ ಶರಣಾಗತಿಯ ಬಗ್ಗೆ ಗೃಹ ಸಚಿವರಿಗೆ ಮಾಹಿತಿಯ ಕೊರತೆ ಇದ್ದ ಹಾಗೆ ಉಲ್ಟಾ-ಪುಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಶಾನ್ಯ ರಾಜ್ಯ ಗಳಲ್ಲೂ ಭಯೋತ್ಪಾದಕರು ಶಾರಣಾಗುತ್ತಾರೆ. ಅಲ್ಲಿ ನಕ್ಸಲರು ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳೆದರು ಶರಣಾಗುತ್ತಾರೆ. ಆ ಬಳಿಕ ಗೃಹ ಸಚಿವರು ಮುಖ್ಯಮಂತ್ರಿಗಳೆದುರು ಬರುತ್ತಾರೆ. ಸಿದ್ದರಾಮಯ್ಯ ಸರಕಾರದ ಈ ಹಿಂದಿನ ಇತಿಹಾಸ ಗೊತ್ತಿದೆ. ಗೌರಿ ಲಂಕೇಶ್ ಹಾಗೂ ಇತರರು ಪ್ರಭಾವ ಬೀರಿದ್ದ ಇತಿಹಾಸ ಗೊತ್ತಿದೆ. ಇಡೀ ನಕ್ಸಲ್ ಶಾರಣಾಗತಿ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಸರ್ಕಾರದ ಮೇಲೆ ಯಾರೋ ಪ್ರಭಾವ ಬೀರಿದ್ದಾರೆ. ಇವರು ನಾಗರಿಕ ಸಮಾಜಕ್ಕೆ ಬಂದು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇನ್ನು ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದ ಮಾಜಿ ಕ್ರಿಕೆಟಿಗ ಅಶ್ವಿನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದಿ ಭಾಷೆಯ ಕುರಿತು ಆರ್. ಅಶ್ವಿನ್ ಒಂದು ದೃಷ್ಟಿಕೋನ ಇಟ್ಟುಕೊಂಡು ಹೇಳಿಕೆ ನೀಡಿದ್ದಾರೆ. ಹಿಂದಿ ಒಂದು ಅಫಿಶಿಯಲ್ ಲ್ಯಾಂಗ್ವೇಜ್. ಪ್ರಧಾನ ಮಂತ್ರಿ ತುಂಬಾ ಕಡೆ ಇದನ್ನೇ ಹೇಳಿದ್ದಾರೆ. ಕೇವಲ ಹಿಂದಿ ಮಾತ್ರ ರಾಷ್ಟ್ರೀಯ ಭಾಷೆ ಅಂತಲ್ಲ, ಎಲ್ಲಾ ಭಾಷೆಯೂ ರಾಷ್ಟ್ರೀಯ ಭಾಷೆ ಅಂತನೇ ಹೇಳಿದ್ದಾರೆ. ನಮ್ಮ ಸರ್ಕಾರದ ಪ್ರಕಾರ ಎಲ್ಲಾ ಭಾಷೆಯು ರಾಷ್ಟ್ರೀಯ ಭಾಷೆ. ಅಲ್ಲದೆ ಪ್ರಧಾನಿ ಅವರು ಕನ್ನಡ ಭಾಷೆಗೆ ತುಂಬಾ ಮರ್ಯಾದೆ ಕೊಡುತ್ತಾರೆ ಅದೇ ರೀತಿ ತಮಿಳುಗೂ ತುಂಬಾ ಮರ್ಯಾದೆ ಕೊಡುತ್ತಾರೆ. ಅಶ್ವಿನ್ ಒಂದು ದೃಷ್ಟಿಕೋನದಲ್ಲಿ ಹೇಳಿದ್ದು, ಕೇವಲ ಹಿಂದಿ ಮಾತ್ರವಲ್ಲ ಎಲ್ಲಾ ಭಾಷೆಯು ರಾಷ್ಟ್ರೀಯ ಭಾಷೆ ಎಂಬ ಅರ್ಥದಲ್ಲಿ ಹೇಳಿದ್ದಾರೆ ಅಷ್ಟೇ ಬೇರೆ ಏನು ವಿಚಾರ ಇಲ್ಲ ಎಂದು ಹೇಳಿರುವುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.