ಬೆಳ್ತಂಗಡಿ, ಜ.12 (DaijiworldNews/AA): ಕಳೆದ ಕೆಲ ದಿನಗಳ ಹಿಂದೆ ಮೂಡಬಿದ್ರಿಯ ಕಂಪ್ಯೂಟರ್ ಕ್ಲಾಸ್ಗೆಂದು ಹೋಗಿದ್ದ ನೆಲ್ಲಿಕಾರಿನ ಮುಸ್ಲಿಂ ಯುವತಿಯೊಬ್ಬಳು ತಾನು ಪ್ರೀತಿಸುತ್ತಿದ್ದ ಹಿಂದೂ ಯುವಕನೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ಮೂಡಬದಿರೆ ಪೊಲೀಸ್ ಠಾಣೆಗೆ ಯುವತಿಯ ಮನೆ ಮಂದಿ ದೂರು ನೀಡಿದ್ದರು. ನಾಪತ್ತೆಯಾಗಿದ್ದ ಯುವತಿ ಹಾಗೂ ಧರ್ಮಸ್ಥಳ ಸಮೀಪದ ಪಟ್ರಮಿಯ ಹರೀಶ್ ಗೌಡ (24) ಕಳೆದೊಂದು ವರ್ಷದ ಹಿಂದೆ ಫೇಸ್ಬುಕ್ ಮೂಲಕ ಪರಿಚಯವಾಗಿ ಮುಂದೆ ಅವರಿಬ್ಬರು ಪ್ರೀತಿ ಮಾಡಿದ್ದರು.
ಇಬ್ಬರು ವಿವಾಹವಾಗಲು ನಿರ್ಧಾರಕ್ಕೆ ಬಂದಿದ್ದರು. ಈ ಹಿನ್ನಲ್ಲೆಯಲ್ಲಿ ಯುವತಿ ಮನೆಮಂದಿಗೂ ತಿಳಿಸದೇ ಯುವಕನ ಸೂಚನೆಯಂತೆ ನೇರವಾಗಿ ಬೆಳ್ತಂಗಡಿ ಕಡೆಗೆ ಪ್ರಯಾಣ ಬೆಳಸಿದ್ದಳು. ಬಳಿಕ ಯುವತಿ ಹಾಗೂ ಯುವಕ ಹಿಂದೂ ಸಂಪ್ರದಾಯದಂತೆ ಬೆಳ್ತಂಗಡಿ ಕುತ್ರೊಟ್ಟು ಶ್ರೀ ಕ್ಷೇತ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಜೋಡಿ ಮದುವೆಯಾದ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿ ತಾವು ಪರಸ್ಪರ ಸಮ್ಮತಿಯ ಮೇರೆಗೆ ವಿವಾಹವಾಗಿರುವುದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ. ಬಳಿಕ ದಂಪತಿ ನೇರವಾಗಿ ಬೆಳ್ತಂಗಡಿ ವಿವಾಹ ನೊಂದಾವಣಾ ಕಚೇರಿಗೆ ತೆರೆಳಿ, ಹಿಂದೂ ವಿವಾಹ ಕಾಯಿದೆಯ ಪ್ರಕಾರ ವಿವಾಹ ನೊಂದಾಣೆಗೆ ಅರ್ಜಿ ಸಲ್ಲಿಸಿದ್ದಾರೆ.
ಯುವತಿ ನಾಪತ್ತೆ ಪ್ರಕರಣ ಕುರಿತು ಮೂಡುಬಿದಿರೆ ಪೊಲೀಸರು ತನಿಖೆ ಆರಂಭಿಸಿದ್ದರು. ಅದೇ ಸಂದರ್ಭದಲ್ಲಿ ಯುವತಿ ಹಾಗೂ ಹರೀಶ್ ಗೌಡ ವಿವಾಹವಾಗಿ ಧರ್ಮಸ್ಥಳ ಠಾಣೆಗೆ ಹಾಜರಾಗಿದ್ದರು. ಈ ವಿಚಾರವು ಮೂಡಬಿದಿರೆ ಪೊಲೀಸರಿಗೆ ತಿಳಿಯುತ್ತಿದ್ದಂತೆ ಯುವತಿಯ ಮನೆಮಂದಿಯನ್ನು ಠಾಣೆಗೆ ಕರೆಯಿಸಿದ್ದಾರೆ. ಆದರೆ ಜೋಡಿ ವಿವಾಹವಾಗಿರುವುದಾಗಿ ತಿಳಿಸಿದ್ದರಿಂದ ಆಕೆಯನ್ನು ಬಿಟ್ಟು ಪೋಷಕರು ತೆರಳಿದ್ದಾರೆ.