ಗಂಗೊಳ್ಳಿ, ಜ.12 (DaijiworldNews/AA): ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾದ ಮೀನುಗಾರನ ಕುರಿತು 9 ದಿನ ಕಳೆದರೂ ಇನ್ನೂ ಯಾವುದೇ ಸುಳಿವು ದೊರೆತಿಲ್ಲ.

ನಾರಾಯಣ ಮೊಗವೀರ (58) ಎಂಬುವವರು ಜ.೨ರಂದು ಸಂಜೆ ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಸರ್ವಮಂಗಳ ಬೋಟಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಾಲು ಜಾರಿ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು.
ನಾಪತ್ತೆಯಾಗಿದ್ದ ನಾರಾಯಣ ಸಮುದ್ರಕ್ಕೆ ಬಿದ್ದ ದಿನದಿಂದಲೂ ಕೋಸ್ಟ್ ಗಾರ್ಡ್ ಪೊಲೀಸರು, ಸ್ಥಳೀಯ ಮೀನುಗಾರರು, ಪೊಲೀಸರು, ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತಿತರರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕೂಡ ಆಗಮಿಸಿ ಮೀನುಗಾರನಿಗಾಗಿ ಶೋಧ ನಡೆಸಿತು. ಗಂಗೊಳ್ಳಿಯಿಂದ ಗೋವಾ ಗಡಿವರೆಗೆ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಹೆಲಿಕಾಪ್ಟರ್ ಬಳಸಿ ಶೋಧ ನಡೆಸಬೇಕು ಎಂದು ಈಶ್ವರ ಮಲ್ಪೆ ಒತ್ತಾಯಿಸಿದರು.
ನಾಪತ್ತೆಯಾದ ಮೀನುಗಾರರ ಕುಟುಂಬಸ್ಥರನ್ನು ಶಾಸಕ ಗುರುರಾಜ ಗಂಟಿಹೊಳೆ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದರು. ಆದಷ್ಟು ಬೇಗ ನಾರಾಯಣನನ್ನು ಪತ್ತೆ ಮಾಡುವುದಾಗಿಯೂ ಭರವಸೆ ನೀಡಿದರು.
ಮೀನುಗಾರರು ಜಿಲ್ಲಾಡಳಿತಕ್ಕೆ ನೆರವು ನೀಡುವಂತೆ ಮನವಿ ಮಾಡಿದರು. ನಾರಾಯಣ ಅವರ ಕುಟುಂಬ ಆರ್ಥಿಕವಾಗಿ ಬಡವರಾಗಿದ್ದು, ದೋಣಿಗೆ ಡೀಸೆಲ್ ಹಾಕಲು ಮತ್ತು ನಾಪತ್ತೆಯಾದ ಮೀನುಗಾರರನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.