ಮಂಗಳೂರು, ಜೂ 10 (Daijiworld News/MSP): ರಾಜ್ಯದ ಕರಾವಳಿಗೆ ಮುಂಗಾರು ಮಳೆ ಪ್ರವೇಶ ಮಾಡಿರುವ ಹಿನ್ನಲೆಯಲ್ಲಿ ಹಾಗೂ ಕರಾವಳಿಗೆ ಚಂಡಮಾರುತದ ಭೀತಿ ತಲೆದೋರಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ (NDRF) ಸೋಮವಾರ ಮಂಗಳೂರಿಗೆ ಬಂದಿಳಿದಿದೆ.
ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯಿಂದ ಬಂದಿರುವ 30 ಮಂದಿಯ ತಂಡವು ಮೂರು ತಿಂಗಳುಗಳ ಕಾಲ ತಂಡ ಕರಾವಳಿಯಲ್ಲಿ ವಾಸ್ತವ್ಯ ಹೂಡಲಿದೆ. ಕರಾವಳಿ ಭಾಗದಲ್ಲಿ ಪ್ರಕೃತಿ ವಿಕೋಪ ಎದುರಾದರೆ ಈ ತಂಡ ಕಾರ್ಯಾಚರಣೆ ನಡೆಸಲಿದೆ. ಮುಖ್ಯವಾಗಿ ದಕ್ಷಿಣ ಕನ್ನಡ ಉಡುಪಿ ಹಾಗೂ ಮಡಿಕೇರಿ ಯಲ್ಲಿ ವಿಪತ್ತು ಎದುರಾದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಿಸಲಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡರೆ ಚಂಡಮಾರುತವಾಗಲಿದೆ. ಇದರ ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.