ಮಂಗಳೂರು, ಜೂ 10 (Daijiworld News/SM): ಕರ್ನಾಟಕ ಗಡಿ ರಾಜ್ಯವಾದ ಕೇರಳದಲ್ಲಿ ನಿಫಾ ರೋಗ ಲಕ್ಷಣ ಕಂಡುಬಂದ ಹಿನ್ನೆಲೆ ಕರ್ನಾಟಕ ರಾಜ್ಯದ ಕೆಲವೊಂದು ಪ್ರದೇಶಗಳಲ್ಲಿ ಪ್ರಮುಖವಾಗಿ ಗಡಿಭಾಗದಲ್ಲಿರುವ ಜನರು ಆತಂಕಕ್ಕೆ ಈಡಾಗಿದ್ದು ಕರ್ನಾಟಕಕ್ಕೂ ನಿಫಾ ರೋಗ ಬರಬಹುದೆಂಬ ಆತಂಕದಲ್ಲಿದ್ದಾರೆ. ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಜತೆಗೆ ಸಚಿವ ಯು.ಟಿ. ಖಾದರ್ ಸಭೆ ನಡೆಸಿದ್ದಾರೆ. ಜಿಲ್ಲೆಯ ಜನತೆಯಲ್ಲಿ ನಿಫಾ ವೈರಸ್ ಬಗ್ಗೆ ಆತಂಕ ಇದ್ದು ಅದನ್ನು ನಿವಾರಿಸಬೇಕು. ಮಾತ್ರವಲ್ಲದೆ, ಮುಂಜಾಗೃತ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಅಲ್ಲದೆ ಅಧಿಕಾರಿಗಳಿಂದ ಸಲಹೆ ಕೆಲವೊಂದು ಅನಿಸಿಕೆ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ. ನಿಫಾ ರೋಗವನ್ನು ತಡೆಯಲು ಯಾವ ರೀತಿಯಲ್ಲಿ ಕ್ರಮಗಳನ್ನು ಮಾಡಬೇಕೆಂದು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಕೊಂಡು, ಹಣ್ಣು ಹಂಪಲು ಮಾರಾಟಗಾರರಿಗೆ ಶುಚಿತ್ವ ಕಾಪಾಡಲು ಮನವರಿಕೆ ಮಾಡಲು ಅಧಿಕಾರಿಗಳಿಗೆ ಸಚಿವ ಖಾದರ್ ಸೂಚಿಸಿದ್ದಾರೆ.
ಇನ್ನು ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕವಾದ ಕೈಗಾರಿಕಾ ಟೌನ್ಶಿಪ್ ಪ್ರಾಧಿಕಾರ ರಚಿಸಲು ನಿರ್ಧರಿಸಲಾಗಿದೆ ಎಂದರು. ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಈ ಪ್ರಾಧಿಕಾರವನ್ನು ರಚಿಸಲಾಗುವುದು ಎಂದರು. ರಾಜ್ಯದ 1976ರ ಮುನಿಸಿಪಲ್ ಕಾಯಿದೆಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ತಂದು ಈ ಪ್ರಾಧಿಕಾರ ರಚಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲೆಯಲ್ಲಿ ಅಕ್ರಮ ಮರಳು ಸಾಗಾಟದ ವಿರುದ್ಧ ನಿರ್ದಾಕ್ಷ್ಯಿಣ ಕ್ರಮ ಕೈಗೊಳ್ಳಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ, ಪೊಲೀಸ್ ಇಲಾಖೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.