ಬಂಟ್ವಾಳ, ಜ.13 (DaijiworldNews/AA): ಪೆರಾಜೆ, ಮಾಣಿ ಮತ್ತು ಅರೆಬೆಟ್ಟು ಮೂರು ಗ್ರಾಮಗಳಿಗೆ ಸೇರಿದ ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ವಿಜ್ಞಾಪನಾ ಪತ್ರವನ್ನು ಪುತ್ತೂರು ವಿವೇಕಾನಂದ ಕಾಲೇಜಿನ ಅಧ್ಯಕ್ಷ ಆರ್.ಎಸ್.ಎಸ್. ಪ್ರಮುಖ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಡುಗಡೆಗೊಳಿಸಿದರು.

ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದ ಅವರು, ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುನರ್ ನವೀಕರಣ ಕಾರ್ಯಗಳು ನಿರ್ವಿಘ್ನವಾಗಿ ನಿರೀಕ್ಷಿತ ಸಮಯದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಲಿ. ಶಿಥಿಲಾವಸ್ಥೆಯಲ್ಲಿರುವ ದೇವಾಸ್ಥಾನದ ಅಭಿವೃದ್ಧಿ ಕಾರ್ಯಗಳು ಗ್ರಾಮದ ಜನರು ಸಂಘಟಿತವಾಗಿ ಮಾಡಿದಾಗ ಅತ್ಯಂತ ಸುಲಭವಾಗಿ ನಿರೀಕ್ಷಿತ ಗುರಿಯನ್ನು ತಲುಪಬಹುದು ಎಂದು ತಿಳಿಸಿದರು.
ಭಾರತ ವೈಶಿಷ್ಟ್ಯ ಪೂರ್ಣವಾಗಿದ್ದು, ಇಲ್ಲಿ ಸಾವಿರ ಸಾವಿರ ವರ್ಷಗಳಿಂದ ದೇವರ ಆಧಾರದಲ್ಲಿ ಜೀವಿಸುತ್ತಿದ್ದಾರೆ. ಎಲ್ಲ ಹೊತ್ತಿನಲ್ಲಿ ಎಲ್ಲಾ ಕಡೆಯಲ್ಲಿ ದೇವರಿದ್ದಾನೆ ಎಂದು ಪೂಜೆ ಮಾಡುವ ಜನ ನಾವಾಗಿದ್ದೇವೆ. ಸಣ್ಣಪುಟ್ಟ ವಿಚಾರಗಳನ್ನು ಮರೆತು ಎಲ್ಲರಿಗೊಸ್ಕರ ಪೂಜೆ ಮಾಡಲು ದೇವಸ್ಥಾನಗಳಿವೆ ಎಂದು ಅವರು ಹೇಳಿದರು.
ಧರ್ಮ, ಸಂಸ್ಕೃತಿಗಳು ಉಳಿಯಬೇಕಾದರೆ ದೇವಸ್ಥಾನಗಳು ಬೆಳಗಬೇಕಾಗಿದೆ. ಧರ್ಮವನ್ನು ರಕ್ಷಣೆ ಮಾಡಿದರೆ, ದೇವರು ರಕ್ಷಣೆ ಮಾಡುತ್ತಾರೆ. ಹಿಂದೂ ಸಮಾಜ ಅಪಾಯದಲ್ಲಿದ್ದು, ದೇವಸ್ಥಾನದ ಬ್ರಹ್ಮಕಲಶದ ಹೆಸರಿನಲ್ಲಿ ಹಿಂದೂಗಳು ಒಂದಾಗುವ ಕೆಲಸ ಆಗಬೇಕಾಗಿದೆ, ದೇವಸ್ಥಾನಗಳು ನಿರ್ಮಾವಾಗುತ್ತಿರುವುದು ಜಗತ್ತಿನ ಹಿತಕ್ಕೋಸ್ಕರ ಎಂದರು.
ಹಿರಿಯರಾದ ಶಂಕರನಾರಾಯಣ ಘನಪಾಠಿಗಳು ಮಾತನಾಡಿ, ಮಕ್ಕಳಿಗೆ ಧರ್ಮ, ಸಂಸ್ಕಾರವನ್ನು ತಿಳಿಸುವ ಕಾರ್ಯ ನಮ್ಮಿಂದ ಆಗಬೇಕಾಗಿದೆ. ಸ್ವಾರ್ಥ ರಹಿತವಾಗಿ ದೇಶದ ಅಭಿವೃದ್ಧಿಯ ಕೆಲಸದಲ್ಲಿ ಮುಂದಿನ ಜನಾಂಗ ಜೊತೆಯಾಗಲಿ ಎಂದು ಶುಭಹಾರೈಸಿದರು.
ಸುಮಾರು 2.3 ಕೋಟಿ ವೆಚ್ಚದಲ್ಲಿ ನವೀಕರಣಗೊಳ್ಳುವ ಈ ದೇವಾಲಯದ ನೀಲನಕಾಶೆ ತಯಾರಿಸಿದ ಜಗನ್ನಿವಾಸ ರಾವ್ ದೇವಾಲಯದ ವಿನ್ಯಾಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಜೀರ್ಣೋದ್ಧಾರ ಅಂಗವಾಗಿ ದೇಣಿಗೆ ನೀಡಿದ ದಾನಿಗಳಿಗೆ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭದಲ್ಲಿ ರಶೀದಿ ನೀಡಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳಾ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಸಚಿನ್ ರೈ ಮಾಣಿಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುಷ್ಪರಾಜ್ ಚೌಟ ಮಾಣಿ, ಗೌರವ ಸಲಹೆಗಾರರಾದ ಬಿ.ಟಿ.ನಾರಾಯಣ ಭಟ್, ಜಗನ್ನಾಥ ಚೌಟ ಬದಿಗುಡ್ಡೆ, ಗೌರವ ಕೋಶಾಧಿಕಾರಿ ಡಾ| ಶ್ರೀನಾಥ್ ಆಳ್ವ ಪೆರಾಜೆಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು, ಗೋಪಾಲ ಮೂಲ್ಯ ನೆಲ್ಲಿ, ಸಂದೀಪ್ ಶೆಟ್ಟಿ ಅರೆಬೆಟ್ಟು, ಕುಶಲ ಎಂ.ಪೆರಾಜೆ, ಹರೀಶ್ ರೈ ಪಾಣೂರು, ದೀಪಕ್ ಪೆರಾಜೆ, ಲಕ್ಮೀಶ ನಾಯ್ಕ, ಶ್ರೀನಿವಾಸ ಪೆರಾಜೆ, ರಾಘವ ಗೌಡ, ನಾರಾಯಣ ಎಂ.ಪಿ. ಮಾದವ ಕುಲಾಲ್, ನಾರಾಯಣ ಶೆಟ್ಟಿ ತೋಟ, ರವೀಂದ್ರ ರೈ ಮಂಜೊಟ್ಟಿ ಉಮೇಶ್ ಎಸ್.ಪಿ. ದಿವಾಕರ ಗೌಡ ಶಾಂತಿಲ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಜಾರಾಮ್ ಕಾಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ನೀಲೇಶ್ವರ ಪದ್ಮನಾಭ ಉಚ್ಚಿಲತ್ತಾಯ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದೆ ಎಂದು ತಿಳಿಸಿದರು.
ಉಪನ್ಯಾಸಕ ಯತಿರಾಜ್ ಪೆರಾಜೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.