ಉಡುಪಿ, ಜ.13 (DaijiworldNews/TA) : ಉತ್ತರ ಪ್ರದೇಶ ಪ್ರಯಾಗರಾಜದ ಪವಿತ್ರ ತ್ರಿವೇಣಿ ಸಂಗಮದಲ್ಲಿ 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭ ಮೇಳದ ಸಂಪೂರ್ಣ ಯಶಸ್ಸಿಗಾಗಿ ನಾಡಿನ ಸಮಸ್ತ ಸಾಧು ಸಂತರು ಹಾಗೂ ಪ್ರತೀ ಮನೆ ಮಂದಿರಗಳಲ್ಲಿ ಸಮಸ್ತ ಹಿಂದು ಸಮಾಜ ದೇವರ ಮುಂದೆ ದೀಪ ಬೆಳಗಿ ಪ್ರಾರ್ಥಿಸುವಂತೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಪೇಕ್ಷಿಸಿದ್ದಾರೆ .

ಮಹಾಕುಂಭ ಮೇಳ ಇಡೀ ಜಗತ್ತಿನ ಒಂದು ಮಹಾಕೌತುಕ . ಪ್ರಪಂಚದ ಅತೀ ದೊಡ್ಡ ಧಾರ್ಮಿಕ ಮೇಳವಾಗಿದೆ . ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನವನ್ನು ಉದ್ದೇಶವಾಗಿಟ್ಟುಕೊಂಡು ದೇಶ ವಿದೇಶಗಳಿಂದ ಕೋಟ್ಯಂತರ ಸನಾತನ ಧರ್ಮೀಯರು ಅತ್ಯಂತ ಧರ್ಮಶ್ರದ್ಧೆಯಿಂದ ಭಾಗವಹಿಸುತ್ತಿದ್ದಾರೆ . ನಮ್ಮ ಆಯುರ್ಮಾನದಲ್ಲಿ ಇದು ಘಟಿಸುತ್ತಿದೆ ಎನ್ನುವುದೇ ಸಮಸ್ತ ಭಾರತೀಯರಿಗೆ ದೊಡ್ಡ ಹೆಮ್ಮೆಯಾಗಿದೆ . 40 ದಿನಗಳ ಈ ಉತ್ಸವದ ಅದ್ಭುತ ಯಶಸ್ಸಿಗಾಗಿ ಗಣ್ಯಾತಿಗಣ್ಯರಿಂದ ಮೊದಲ್ಗೊಂಡು ಕಾರ್ಮಿಕರ ವರೆಗೆ ಲಕ್ಷಾಂತರ ಜನ ಹಗಲಿರುಳೂ ಶ್ರಮಿಸುತ್ತಿದ್ದಾರೆ . ಸುಮಾರು 50 ಕೋಟಿಯಷ್ಟು ಜನ ಭಾಗವಹಿಸುತ್ತಿದ್ದಾರೆ .
ಇದರ ಯಶಸ್ಸು ಒಂದು ಮಹಾ ಸವಾಲು . ಮನುಷ್ಯ ಪ್ರಯತ್ನ ಮತ್ತು ಭಗವಂತನ ಅನುಗ್ರಹದಿಂದ ಈ ಮಹೋತ್ಸವ ಯಾರೊಬ್ಬರಿಗೂ ಯಾವೊಂದು ರೀತಿಯ ತೊಂದರೆ , ವಿಘ್ನ , ಹಾನಿಗಳೂ ಇಲ್ಲದೇ ಅತ್ಯಂತ ಯಶಸ್ವಿಯಾಗಬೇಕು . ಆ ಯಶಸ್ಸಿನಿಂದ ಇಡೀ ದೇಶದಲ್ಲಿ ಶಾಂತಿ ಸುಭಿಕ್ಷೆ ಸುರಕ್ಷೆ ಸಮೃದ್ಧಿಗಳು ನೆಲೆಯಾಗಬೇಕು . ಇದಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ಸಮಸ್ತ ಹಿಂದುಗಳಿಗೂ ಒಂದು ಪವಿತ್ರ ಕರ್ತವ್ಯವಾಗಿದೆ .ಆದ್ದರಿಂದ ನಾಡಿನ ಎಲ್ಲ ಮಠಾಧೀಶರು ಸಾಧು ಸಂತರು , ದೇವಳಗಳ ಅರ್ಚಕರು ವೈದಿಕ ವಿದ್ವಾಂಸರು ಹಾಗೂ ಕೋಟ್ಯಂತರ ಹಿಂದುಗಳು ತಮ್ಮ ಮನೆ ಮಠ ಮಂದಿರಗಳಲ್ಲಿ ದೇವರ ಮುಂದೆ ದೀಪಬೆಳಗಿ ಮಹಾಕುಂಭ ಮೇಳದ ಯಶಸ್ಸಿಗಾಗಿ ಪ್ರಾರ್ಥಿಸೋಣ ಎಂದರು.
ಇನ್ನು ಗೋವಿನ ಕೆಚ್ಚಲು ತುಂಡರಿಸಿದ ಪ್ರಕರಣ ವಿಚಾರವಾಗಿ ಅಯೋಧ್ಯೆಯಿಂದ ಖಂಡನೆ ವ್ಯಕ್ತಪಡಿಸಿದ ಪೇಜಾವರ ಶ್ರೀ ಇದೊಂದು ಅತ್ಯಂತ ಹೇಯ ಕೃತ್ಯ. ಯಾವ ಮಾತಿನಿಂದ ಖಂಡಿಸಬೇಕು ಎಂದು ತಿಳಿಯುತ್ತಿಲ್ಲ. ಗೋ ಆಸ್ಪತ್ರೆ ಸ್ಥಳಾಂತರವಾಗಬಾರದು ಎಂದು ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಗೆ ಗೋವನ್ನು ಕರೆದುಕೊಂಡು ಹೋಗಲಾಗಿತ್ತು ಇದೀಗ ಗೋವಿನ ಕೆಚ್ಚಲನ್ನೇ ಕೊಯ್ಯುವ ದುಷ್ಕೃತ್ಯ ನಡೆದು ಹೋಗಿದೆ. ಸಾಧು ಸ್ವಭಾವಕ್ಕೆ ಇನ್ನೊಂದು ಪರ್ಯಾಯ ಪದ ಗೋವು. ಗೋವಿನ ಕೆಚ್ಚಲನ್ನೇ ಕೊಯ್ಯುವುದು ದುಷ್ಕ್ಕತ್ಯ. ಹಾಲನ್ನು ಬಳಸಿಕೊಂಡು ನಮ್ಮ ಜೀವನ ನಡೆಯುತ್ತದೆ ಬೆಳಗಾದರೆ ನಾವು ಕಾಫಿ ಚಾ ಎಂದು ಕುಡಿಯುತ್ತೇವೆ ದುಷ್ಕರ್ಮಿಯ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು.ತೆಗೆದುಕೊಂಡ ಕ್ರಮದಿಂದ ಇಂತಹ ದುಷ್ಕೃತ್ಯ ಮರಳದಂತೆ ಪಾಠವಾಗಬೇಕು. ಕಠಿಣ ಪಾಠವಾಗದಿದ್ದರೆ ನಾವು ದೃಢ ನಿರ್ಧಾರ ತೆಗೆದುಕೊಳ್ಳುತ್ತೇವೆ, ಉಪವಾಸ ಕುಳಿತು ಹೋರಾಟ ಮಾಡಬೇಕಾದೀತು ಎಂದು ಶ್ರೀ ವಿಶ್ವ ಪ್ರಸನ್ನ ತೀರ್ಥರು ಎಚ್ಚರಿಸಿದರು.