ಕಾರ್ಕಳ, ಜ.13 (DaijiworldNews/AA): ಗೂಡಂಗಡಿಯ ಮೇಲ್ಚಾವಣೆ ತೆಗೆದು ಬೀಗ ಮುರಿದು ಕಳವು ಮಾಡಿದ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಮೂಡಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆ ನಿಡ್ಡೋಡಿ ನಿರೋಡೆಯ ರೋಷನ್ ವಿಲ್ಸನ್ ಕ್ಯಾಡ್ರಸ್(37), ಕೊಂಪದವು ನೆಲ್ಲಿತೀರ್ತ ಸಾಂತ್ರಬೈಲ್ ನ ನಿಶಾಂಕ್ ಪೂಜಾರಿ(18), ತೆಂಕ ಎಕ್ಕಾರಿನ ನಿರೋಡೆಯ ರೋಹಿತ್ ಮಸ್ಕರೇನಸ್ (21) ಬಂಧಿತ ಆರೋಪಿಗಳು.
ಜನವರಿ 9 ರಾತ್ರಿ ಮೂಡುಬಿದಿರೆ ಪುತ್ತಿಗೆ ಗ್ರಾಮದ ಮುಲ್ಕಿ ಕ್ರಾಸ್ ಎಂಬಲ್ಲಿರುವ ಜಯಶ್ರಿ ಸ್ಟೋರ್ ಎಂಬ ಗೂಡಂಗಡಿಯ ಮೇಲ್ಚಾವಣಿಯ ಸೀಟ್ ನ್ನು ತೆಗೆದು, ಬೀಗವನ್ನು ಒಡೆದು ಅಂಗಡಿಯಲ್ಲಿದ್ದ ಸುಮಾರು ರೂ. 20,000 ನಗದು ಮತ್ತು ಸುಮಾರು ರೂ. 48,000 ಮೌಲ್ಯದ ಸಿಗರೇಟು, ತಿಂಡಿ, ನೀರು ಬಾಟಲ್, ಕೊಲ್ಡ್ ಡ್ರಿಂಕ್ಸ್, ಚಾಕೊಲೇಟ್, ಮಿಕ್ಸರ್, ಬಿಸ್ಕೆಟ್ ಇತ್ಯಾದಿ ವಸ್ತುಗಳನ್ನು ಕಳವು ಗೈಯಲಾಗಿತ್ತು.
ಆರೋಪಿಗಳು ಮುಲ್ಕಿ, ಬಟ್ಟೆ, ಕಾರ್ಕಳ ಮತ್ತು ವೇಣೂರು ಠಾಣಾ ವ್ಯಾಪ್ತಿಯಲ್ಲಿ ಸುಮಾರು 3 ವರ್ಷಗಳಿಂದ 25 ಕ್ಕೂ ಹೆಚ್ಚು ಗೂಡಂಗಡಿಗಳ ವಸ್ತುಗಳನ್ನು ಕಳವು ಮಾಡಿರುತ್ತಾರೆ.
ಪ್ರಕರಣದ ಆರೋಪಿಗಳ ಮತ್ತು ಸೊತ್ತು ಪತ್ತೆಯ ಬಗ್ಗೆ ಮೂಡಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು ಮತ್ತು ಆ್ಯಕ್ಟಿವ್ ಸ್ಕೂಟರ್ ಮತ್ತು ರೂ. 5000 ಹಣವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ. 3,55,000 ಆಗಿರುತ್ತದೆ.
ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ, ಡಿಸಿಪಿಗಳಾದ ಸಿದ್ಧಾರ್ಥ ಗೊಯಲ್ (ಕಾ&ಸು), ರವಿಶಂಕರ್ (ಅ&ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ನೇತೃತ್ವದಲ್ಲಿ ನವೀನ್ ಪಿ.ಎಸ್.ಐ, ರಾಜೇಶ್ ಎಎಸ್ಐ ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಸಾಲ್, ಮೊಹಮ್ಮದ್ ಹುಸೈನ್ ಅಕೀಲ್ ಅಹಮ್ಮದ್, ನಾಗರಾಜ್, ಪ್ರದೀಪ್, ವೆಂಕಟೇಶ್, ಸತೀಶ್ ಮತ್ತು ರಾಜೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.