ಬಂಟ್ವಾಳ, ಜ.13 (DaijiworldNews/AA): ನಿವೇಶನ, ಹಕ್ಕುಪತ್ರ ಸಹಿತ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಕೊರಗ ಸಮುದಾಯದ ಕುಟುಂಬಗಳನ್ನು ಅಧಿಕಾರಿಗಳೊಂದಿಗೆ ಖುದ್ದು ಭೇಟಿ ಮಾಡಿ ಪರಿಶೀಲಿಸಿ, ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕೊರಗ ಸಮುದಾಯದ ಕುಂದುಕೊರತೆಗಳ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರಂಭದಲ್ಲಿ ಕೊರಗ ಸಮುದಾಯದ ಸಮಸ್ಯೆಗಳನ್ನು ಕೊರಗ ಸಮುದಾಯದ ಮುಖಂಡ ಕೆ.ಪುತ್ರನ್ ಅವರು, ಗ್ರಾಮಪಂಚಾಯತ್ ಗಳಲ್ಲಿ ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಿಡುವ ಶೇ.೨೫ ರ ಅನುದಾನದಲ್ಲಿ ಮೂರನೇ ಒಂದು ಭಾಗವನ್ನು ಕೊರಗ ಸಮುದಾಯಕ್ಕೆ ಮೂಲಭೂತ ಸೌಕರ್ಯ ಒದಗಿಸಲು ವಿನಿಯೋಗಿಸಬೇಕು, ಜಾಗವಿಲ್ಲದೆ ಸಂಕಷ್ಟದಲ್ಲಿರುವ ಕೊರಗ ಸಮುದಾಯದ ಕುಟುಂಬಗಳಿಗೆ ಜಮೀನುಸೇರಿ, ಹಕ್ಕುಪತ್ರ ಒದಗಿಸಲು ಆಡಳಿತ ಗಮನಹರಿಸಬೇಕು. ಪುರಸಭಾ ವ್ಯಾಪ್ತಿಯಲ್ಲಿ ಕೊರಗ ಸಮುದಾಯ ಭವನ ಸ್ಥಾಪನೆಗೆ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಬೇಕು. ಈಗ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನ ಸಾಲದು, ಹಂಚಿನ ಮನೆಯ ಯೋಜನೆಯನ್ನು ಕೈ ಬಿಟ್ಟು ಟೇರೆಸ್ ಮನೆ ನಿರ್ಮಾಣದ ಯೋಜನೆ ರೂಪಿಸುವಂತೆ ಒತ್ತಾಯಿಸಿದರು.
ಕನ್ಯಾನದ ಸುಂದರಿಯವರು ಮಾತನಾಡಿ, ಜಮೀನಿನ ಹಕ್ಕು ಪತ್ರ ಸಮಸ್ಯೆ ಇರುವುದರಿಂದ ಉದ್ಯೋಗ ಖಾತ್ರಿ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಈ ಬಗ್ಗೆ ಗಮನಹರಿಸಿ. ಮಾಹಿತಿಯ ಕೊರತೆಯಿಂದ ಆಧಾರ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಗುರುತಿನ ಚೀಟಿ ಸಹಿತ ಹಲವು ಯೋಜನೆಗಳಿಂತ ವಂಚಿತರಾಗುತ್ತಿದ್ದಾರೆ. ಈ ಕುರಿತು ಗ್ರಾಮಪಂಚಾಯತ್ ಗಳು ವಿಶೇಷ ಗಮನಹರಿಸುವಂತೆ ಸಭೆಯಲ್ಲಿ ಒತ್ತಾಯ ಕೇಳಿಬಂತು.
ಪರಿಹಾರ ಪಡೆದುಕೊಳ್ಳಲು ಶಾಸಕರ ಸಲಹೆ
ನಾವು ಸೌಕರ್ಯಗಳಿಗೆ ಹಲವು ಅರ್ಜಿಗಳನ್ನು ನೀಡಿದರೂ, ಅದಕ್ಕೆ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರಿಗೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ಅವರು, ಈಗ ಬ್ರೋಕರ್ ಗಳು ಜಾಸ್ತಿಯಾಗಿದ್ದಾರೆ. ನೀವು ಅವರ ಬಳಿ ಹೋಗುವುದು ಬಿಟ್ಟು ಶಾಸಕರಲ್ಲಿ ಹೇಳಿಕೊಂಡಿದ್ದರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತಿತ್ತು. ಇನ್ನು ಸಮಯ ಮಿಂಚಿಲ್ಲ ನನ್ನ ಕಚೇರಿಗೆ ಬನ್ನಿ, ಮೂಲಭೂತ ಸೌಕರ್ಯಗಳ ಒದಗಿಸಲಾಗುತ್ತದೆ. ಸರಕಾರದ ಯೋಜನೆಗಳನ್ನು ಸಮುದಾಯದ ಪ್ರಮುಖರು ಅರಿತು ಕೊಂಡು ಕುಟುಂಬಗಳು ಸದುಪಯೋಗ ಪಡಿಸಿಕೊಳ್ಳಲು ಪ್ರೇರಣೆಯಾಗಬೇಕು ಎಂದರು.
ಬAಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿದರು. ಸಮಾಜ ಕಲ್ಯಾಣಾಧಿಕಾರಿ ಜಯಶ್ರೀ ವಂದಿಸಿದರು.