Karavali
25ನೇ ವಸಂತಕ್ಕೆ ಕಾಲಿಟ್ಟ 'ದಾಯ್ಜಿವರ್ಲ್ಡ್.ಕಾಂ'
- Tue, Jan 14 2025 11:59:24 AM
-
ಮಂಗಳೂರು, ಜ.14 (DaijiworldNews): 2001ರ ಜನವರಿ 14 ಮಕರ ಸಂಕ್ರಾಂತಿಯಂದು ದಾಯ್ಜಿ ದುಬೈ ಕೊಂಕಣಿ ಬರಹಗಾರರ ವೇದಿಕೆಯ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 'ದಾಯ್ಜಿ.ಬಿಗ್ಸ್ಟೆಪ್.ಕಾಂ' ಎಂಬ ಹೆಸರಿನೊಂದಿಗೆ ಸ್ಥಳೀಯ ಭಾಷೆಯ ವೆಬ್ಸೈಟ್ ಆರಂಭಿಸಿದ ದಾಯ್ಜಿವರ್ಲ್ಡ್.ಕಾಂ ಇಂದು ತನ್ನ 24 ವರ್ಷಗಳ ಸುಧೀರ್ಘ ಪಯಣವನ್ನು ಪೂರ್ಣಗೊಳಿಸಿದೆ. ಎನ್ಆರ್ಐ ಉದ್ಯಮಿ ಮತ್ತು ದಾನಿ ರೊನಾಲ್ಡ್ ಕೊಲಾಕೊ ಅವರಿಂದ ಉದ್ಘಾಟನೆಗೊಂಡ ಪಯಣವು ಹಲವು ಆಶಯಗಳು ಮತ್ತು ಸವಾಲುಗಳಿಂದ ಕೂಡಿತ್ತು. ಇಂದು 24 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ನಾವು ನಮ್ಮ ಆರಂಭಿಕ ದಿನಗಳನ್ನು ಮತ್ತು ಗಮನಾರ್ಹ ಬೆಳವಣಿಗೆಯನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ.
ಮಾತೃಭಾಷೆ ಕೊಂಕಣಿಯನ್ನು ಪ್ರೋತ್ಸಾಹಿಸುವ ಒಂದು ಸಣ್ಣ ಪ್ರಯತ್ನವಾಗಿ ಆರಂಭವಾದ ಈ ವೆಬ್ಸೈಟ್, ಶೀಘ್ರದಲ್ಲೇ ಕರಾವಳಿ ಕರ್ನಾಟಕದ ಪ್ರವಾಸಿಗರ ಸುದ್ದಿ ಮತ್ತು ಮಾಹಿತಿಯ ಅಗತ್ಯಗಳನ್ನು ಪೂರೈಸುವ ವೇದಿಕೆಯಾಗಿ ರೂಪಾಂತರಗೊಂಡಿತು. 2003 ರಲ್ಲಿ ದಾಯ್ಜಿವರ್ಲ್ಡ್.ಕಾಂ ಎಂದು ಮರುನಾಮಕರಣಗೊಂಡ ವೆಬ್ಸೈಟ್, ಕೊಂಕಣಿ ಸಾಹಿತ್ಯ ಪೋರ್ಟಲ್ನಿಂದ ಪೂರ್ಣ ಪ್ರಮಾಣದ ಸುದ್ದಿ ಮತ್ತು ಮಾಹಿತಿ ತಾಣವಾಗಿ ಎರಡು ವರ್ಷಗಳ ಒಳಗೆ ಪರಿವರ್ತನೆಗೊಂಡಿತು. 2007 ರ ವೇಳೆಗೆ, ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಗುಣಮಟ್ಟದ ಸುದ್ದಿಗಳ ಬೇಡಿಕೆಯಿಂದಾಗಿ ಇದನ್ನು ಖಾಸಗಿ ಲಿಮಿಟೆಡ್ ಕಂಪನಿಯಾಗಿ ಸ್ಥಾಪಿಸಲಾಯಿತು.
ಇಂದು, ದಾಯ್ಜಿವರ್ಲ್ಡ್.ಕಾಮ್ ಪ್ರಪಂಚದಾದ್ಯಂತ 2 ಮಿಲಿಯನ್ಗಳಿಗಿಂತ ಹೆಚ್ಚಿನ ವಿಸಿಟರ್ಸ್ ಗಾಗಿ ಸೇವೆ ಸಲ್ಲಿಸುತ್ತಿದ್ದು, ಸ್ಥಳೀಯ, ಪ್ರಾದೇಶಿಕ, ದೇಶೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ನೀಡುತ್ತಿದೆ. ನಮ್ಮ ಪ್ರೇಕ್ಷಕರೂ ಜಾತಿ, ಧರ್ಮ, ಭಾಷೆ ಮತ್ತು ಭೂಗೋಳದ ಬಂಧನಗಳನ್ನು ಮೀರಿ ವಸುಧೈವ ಕುಟುಂಬಕಂ - ವಿಶ್ವವೇ ಒಂದು ಕುಟುಂಬ ಎಂಬ ತತ್ತ್ವವನ್ನು ಪ್ರತಿಬಿಂಬಿಸುತ್ತಾರೆ.
ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ, ನಿರ್ವಹಣೆ ಮತ್ತು ಸಿಬ್ಬಂದಿ ಸೇರಿದಂತೆ ದಾಯ್ಜಿವರ್ಲ್ಡ್ ತಂಡವು ನಮ್ಮ ಪಯಣದಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಗೆಲುವಿನ ಮತ್ತು ಸವಾಲಿನ ಸಮಯಗಳಲ್ಲಿ ನಿಮ್ಮ ಪ್ರೋತ್ಸಾಹವು ನಮ್ಮ ಬಲವಾಗಿದೆ. ಪ್ರತಿಯೊಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಹೆಸರನ್ನು ಉಲ್ಲೇಖಿಸುವುದು ಅಸಾಧ್ಯವಾದರೂ, ಈ ಪಯಣದ ಭಾಗವಾಗಿರುವ ಎಲ್ಲಾ ಗ್ರಾಹಕರು, ಓದುಗರು, ಜಾಹೀರಾತುದಾರರು, ಪ್ರಾಯೋಜಕರು ಮತ್ತು ಬೆಂಬಲಿಗರಿಗೆ ನಾವು ತುಂಬಾ ಋಣಿಯಾಗಿದ್ದೇವೆ.
ಸಾಧನೆಗಳ ಮತ್ತು ಉಪಕ್ರಮಗಳ ವರ್ಷ
ಕನಸಿನ ಮೀರಿದ ದಾನಒಂದು ಸರಳವಾದ ಯೋಚನೆಯಾಗಿ ಆರಂಭವಾದದ್ದು ಕಲ್ಪನೆಯನ್ನು ಮೀರಿದ ಒಂದು ದಾನ ಕಾರ್ಯವಾಗಿ ಬೆಳೆದಿದೆ. ಹಲವು ವರ್ಷಗಳಲ್ಲಿ, ನಾವು ನಮ್ಮ ವಿಶ್ವಾಸಾರ್ಹ ಮತ್ತು ಪರಿಶೀಲಿಸಿದ ಮನವಿ ವ್ಯವಸ್ಥೆಯ ಮೂಲಕ ದಾನಿಗಳನ್ನು ನೇರವಾಗಿ ಪ್ರಯೋಜನ ಪಡೆಯುವವರೊಂದಿಗೆ ಸಂಪರ್ಕಿಸಿ 30 ಕೋಟಿ ರೂಪಾಯಿಗಿಂತಲೂ ಹೆಚ್ಚು ದಾನ ಕಾರ್ಯಗಳನ್ನು ಮಾಡಿದ್ದೇವೆ. ಯಾವುದೇ ಟ್ರಸ್ಟ್ ಅಥವಾ ಖಾತೆಯನ್ನು ನಿರ್ವಹಿಸದೆ, ಈ ವೇದಿಕೆ ಅಗತ್ಯವಿರುವವರಿಗೆ ಭರವಸೆಯ ದೀಪವಾಗಿ ರೂಪುಗೊಂಡಿದೆ. ಯಾವುದೇ ಹಿನ್ನೆಲೆಗಳನ್ನು ಪ್ರಶ್ನಿಸದೆ ನಿಸ್ವಾರ್ಥವಾಗಿ ಕೊಡುಗೆ ನೀಡಿದ ನಮ್ಮ ಓದುಗರ ಉದಾರತೆಯೇ ನಮ್ಮ ಅತ್ಯಂತ ಹೆಮ್ಮೆಯ ಸಾಧನೆ. ಕರುಣೆಯ ಈ ಧ್ಯೇಯವು ಪ್ರತಿದಿನವೂ ನಮಗೆ ಪ್ರೇರಣೆ ನೀಡುತ್ತಲಿದೆ.
ಪತ್ರಿಕೋದ್ಯಮದ ಮೂಲಕ ಸಾಮಾಜಿಕ ಪ್ರಭಾವ
ನಮ್ಮ ಸುದ್ದಿ ವರದಿಗಳು, ಲೇಖನಗಳು ಮತ್ತು ತನಿಖಾ ಸುದ್ದಿಗಳು ಸರ್ಕಾರಿ ಅಧಿಕಾರಿಗಳು, ಇಲಾಖೆಗಳು ಮತ್ತು ರಾಜಕೀಯ ನಾಯಕರನ್ನು ತಲುಪಿ, ಅವರ ಕೆಲಸಗಳಿಗೆ ಕನ್ನಡಿ ಹಿಡಿದು, ಸಾರ್ವಜನಿಕರ ಕಡೆಗೆ ಅವರ ಜವಾಬ್ದಾರಿಗಳನ್ನು ನೆನಪಿಸುತ್ತವೆ. ಸಾಮಾಜಿಕ ಬದಲಾವಣೆಯನ್ನು ಉತ್ತೇಜಿಸುವಲ್ಲಿ ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ಅಚಲ ನಿಷ್ಠೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ.
ಮಹತ್ವಾಕಾಂಕ್ಷೆಯ ಪತ್ರಕರ್ತರು, ಸಂಗೀತ ನಿರ್ಮಾಪಕರು ಮತ್ತು ಸೌಂಡ್ ಇಂಜಿನಿಯರ್ಗಳಿಗೆ ಹೊಸ ಉಪಕ್ರಮಗಳು
ಮುಂದಿನ ಪೀಳಿಗೆಯ ಪತ್ರಕರ್ತರನ್ನು ಉತ್ತೇಜಿಸಲು, ದಾಯ್ಜಿವರ್ಲ್ಡ್ ಮೀಡಿಯಾ ಪದವೀಧರರು ಮತ್ತು ಮಹತ್ವಾಕಾಂಕ್ಷೆಯ ಪತ್ರಕರ್ತರಿಗಾಗಿ ನಾಲ್ಕು ತಿಂಗಳ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಈ ಕೋರ್ಸ್ ವೆಬ್ ಮೀಡಿಯಾ, ಟಿವಿ ಪತ್ರಿಕೋದ್ಯಮ, ದೃಶ್ಯ-ಶ್ರವ್ಯ ವಿಷಯ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡುತ್ತದೆ. ನಮ್ಮ ಅನುಭವಿ ತಂಡ ಮತ್ತು ಅತಿಥಿ ವೃತ್ತಿಪರರು ಮಾರ್ಗದರ್ಶನ ನೀಡುತ್ತಾರೆ. ಛಾಯಾಚಿತ್ರ ಮತ್ತು ವಿಡಿಯೋ ನಿರ್ಮಾಣದಲ್ಲಿ ಆಸಕ್ತಿ ಇರುವವರಿಗೂ ಪ್ರಾಯೋಗಿಕ ತರಬೇತಿ ನೀಡುತ್ತೇವೆ.
ಸಂಗೀತ ನಿರ್ಮಾಣ ಮತ್ತು ಸೌಂಡ್ ಇಂಜಿನಿಯರಿಂಗ್ನಲ್ಲಿ ಸರ್ಟಿಫಿಕೇಟ್ ಕೋರ್ಸ್ಗಳನ್ನು ಸಹ ನೀಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು hrdaijiworld@gmail.com ಮೂಲಕ ನಮ್ಮನ್ನು ಸಂಪರ್ಕಿಸಬಹುದು ಅಥವಾ +91 8147479876 ಗೆ ವಾಟ್ಸಾಪ್/ಕರೆ ಮಾಡಬಹುದು.
ದಾಯ್ಜಿವರ್ಲ್ಡ್ ನ ಚಲನಚಿತ್ರ ನಿರ್ಮಾಣ ಸಂಸ್ಥೆಯ ಪರಿಚಯ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧಿಕೃತವಾಗಿ ನೋಂದಾಯಿಸಲಾದ ದಾಯ್ಜಿವರ್ಲ್ಡ್ ನ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸುತ್ತಿರುವುದನ್ನು ಘೋಷಿಸಲು ನಮಗೆ ಸಂತೋಷವಾಗಿದೆ. ನಮ್ಮ ಮೊದಲ ಕೊಂಕಣಿ ಚಲನಚಿತ್ರವು ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ದಾಯ್ಜಿವರ್ಲ್ಡ್.ಕಾಂ 24 ವರ್ಷ ಪೂರೈಸಿದ ಈ ವಿಶೇಷ ದಿನದಂದು, ನಮ್ಮ ಮೈಲಿಗಲ್ಲು ಆಚರಣೆಯ ಭಾಗವಾಗಿ ಚಲನಚಿತ್ರದ ಶೀರ್ಷಿಕೆಯನ್ನು ನಾವು ಬಹಿರಂಗಪಡಿಸುತ್ತಿದ್ದೇವೆ.
ದಾಯ್ಜಿವರ್ಲ್ಡ್ ಫಿಲ್ಮ್ಸ್ನ ಮೊದಲ ಕೊಂಕಣಿ ಚಲನಚಿತ್ರ, 'ಬಾಪಾಚೆ ಪುತಾಚೆ ನಾಂವಿಂ'. ಈ ಚಲನಚಿತ್ರವನ್ನು ಎನ್ಆರ್ಐ ಉದ್ಯಮಿ ಮತ್ತು ದಾನಿ ಮೈಕೆಲ್ ಡಿ'ಸೋಜಾ ಅವರು ನಿರ್ಮಾಣ ಮಾಡಿದ್ದಾರೆ. ಕೊಂಕಣಿ ಯೋಜನೆಗೆ ಅವರ ದೂರದೃಷ್ಟಿಯ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಕೊಂಕಣಿ ಧಾರಾವಾಹಿಗಳು ಮತ್ತು ರಂಗ ಪ್ರದರ್ಶನಗಳಲ್ಲಿ ಖ್ಯಾತ ಗಳಿಸಿರುವ ಸ್ಟ್ಯಾನಿ ಬೆಳಾ ಅವರು ಬರೆದು ನಿರ್ದೇಶಿಸಿರುವ ಈ ಚಲನಚಿತ್ರವು ನಮ್ಮ ಪ್ರಯಾಣದಲ್ಲಿ ಒಂದು ರೋಮಾಂಚಕಾರಿ ಅಧ್ಯಾಯವಾಗಿದೆ. ಶೀಫ್ರದಲ್ಲೇ ಈ ಬಗ್ಗೆ ಮುಂದಿನ ವಿವರಗಳನ್ನು ನೀಡಲಿದ್ದೇವೆ.
ಮುಂದೆ ನಾವು ನಮ್ಮ ಪ್ರೇಕ್ಷಕರನ್ನು ಸೆಳೆಯುವ ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರಗಳನ್ನು ನಿರ್ಮಿಸಲು ಯೋಜಿಸಿದ್ದೇವೆ.
ಕೃತಜ್ಞತೆಗಳು
ನಮ್ಮ ಪ್ರಿಯ ಓದುಗರೇ, ನೀವು ನಮ್ಮ ಅತ್ಯಂತ ದೊಡ್ಡ ಬಲವಾಗಿ ಮತ್ತು ಪ್ರೇರಣೆಯಾಗಿದ್ದೀರಿ. ನಮ್ಮ ಪ್ರಯಾಣದಲ್ಲಿ ಸವಾಲುಗಳಿದ್ದರೂ, ಪ್ರತಿಯೊಂದು ಹೆಜ್ಜೆಯೂ ಒಂದು ಕಲಿಕೆಯ ಅನುಭವವಾಗಿದೆ. ನಿಮ್ಮ ಮಾರ್ಗದರ್ಶನ, ಮೆಚ್ಚುಗೆ ಮತ್ತು ರಚನಾತ್ಮಕ ಪ್ರತಿಕ್ರಿಯೆಗಳು ನಮ್ಮನ್ನು ನಿರಂತರವಾಗಿ ಸುಧಾರಿಸಲು ಪ್ರೇರೇಪಿಸಿವೆ.
ನಮ್ಮ ಜಾಹೀರಾತುದಾರರು, ಪ್ರಾಯೋಜಕರು, ಮಾರ್ಕೆಟಿಂಗ್ ಪಾಲುದಾರರು ಮತ್ತು ಸಂಪೂರ್ಣ ಸಂಪಾದಕೀಯ ಮತ್ತು ಬೆಂಬಲ ತಂಡಕ್ಕೂ ನಾವು ತುಂಬಾ ಕೃತಜ್ಞರಾಗಿದ್ದೇವೆ - ನೀವು ದಾಯ್ಜಿವರ್ಲ್ಡ್ ನ ಯಶಸ್ಸಿನ ಬೆನ್ನೆಲುಬಾಗಿದ್ದೀರಿ.
ಈ ಮೈಲಿಗಲ್ಲಾದ 25ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಮುಂದಿನ ವರ್ಷ ನಾವು ಹಲವು ಹೊಸ ಉಪಕ್ರಮಗಳನ್ನು ಅನಾವರಣಗೊಳಿಸಲು ಮತ್ತು ನಮ್ಮ ಸಿಲ್ವರ್ ಜುಬಿಲಿಯನ್ನು ಭವ್ಯವಾಗಿ ಆಚರಿಸಲು ಎದುರು ನೋಡುತ್ತಿದ್ದೇವೆ. ಈ ಪ್ರಯಾಣವು ಯಶಸ್ಸಿನ ಕಥೆಯಷ್ಟೇ ಅಲ್ಲ, ಪ್ರಗತಿ, ಪರಿಶ್ರಮ ಮತ್ತು ಹಂಚಿಕೆಯ ದೃಷ್ಟಿಯ ಕಥೆಯಾಗಿದೆ.
ನಮ್ಮನ್ನು ಸಂಪರ್ಕಿಸಲು ಅಥವಾ ವಿಚಾರಿಸಲು, ದಯವಿಟ್ಟು ನಮ್ಮ +91 6362321633 ನಂಬರ್ ಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ.
ನಮ್ಮ ಈ ಅದ್ಭುತ ಪ್ರಯಾಣದ ಭಾಗವಾಗಿರುವುದಕ್ಕೆ ನಿಮಗೆ ಧನ್ಯವಾದಗಳು. ನಾವು ಬೆಳೆಯುತ್ತಲೇ ಇರುತ್ತೇವೆ, ನವೀಕರಿಸುತ್ತೇವೆ ಮತ್ತು ಜಗತ್ತಿನಾದ್ಯಂತ ಜನರು, ಸಮುದಾಯಗಳು ಮತ್ತು ಹೃದಯಗಳನ್ನು ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇವೆ.
ಹೊಸ ಚೈತನ್ಯದೊಂದಿಗೆ, ದೃಢ ಬದ್ಧತೆಯೊಂದಿಗೆ ಮತ್ತು ನಿಮಗೆ ಅತ್ಯುತ್ತಮವಾದದ್ದನ್ನು ನೀಡುವ ಭರವಸೆಯೊಂದಿಗೆ 25ನೇ ವರ್ಷಕ್ಕೆ ಕಾಲಿಡೋಣ..