ಉಡುಪಿ, ಜ.14 (DaijiworldNews/AA): ಬಸ್ ಮಾರಾಟದ ವ್ಯವಹಾರದಲ್ಲಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಕೊರಟಗೆರೆ ತಾಲ್ಲೂಕಿನ ಸೈಯದ್ ಘೌಸ್ ಎಚ್ ಎಸ್ (59) ಅವರು ಇಬ್ಬರು ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ, ತಮ್ಮ ಗ್ರಾಮಕ್ಕಾಗಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸಲು ಬಯಸಿದ್ದ ಸೈಯದ್ ಘೌಸ್ ಅವರು ಪರಿಚಯಸ್ಥರ ಸಹಾಯವನ್ನು ಪಡೆದರು. ಅವರಲ್ಲಿ ಒಬ್ಬರಾದ ಹನುಮಂತರಾಯಪ್ಪ ಅವರು ಆನ್ಲೈನ್ ಜಾಹೀರಾತು ವೇದಿಕೆಯಲ್ಲಿ ಮಾರಾಟಕ್ಕೆ ಲಭ್ಯವಿರುವ ಬಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಸೈಯದ್ ಘೌಸ್ ನೀಡಲಾದ ಸಂಖ್ಯೆಗೆ ಸಂಪರ್ಕಿಸಿದಾಗ, ಇನ್ನೊಂದು ತುದಿಯಲ್ಲಿರುವ ವ್ಯಕ್ತಿ ತನ್ನನ್ನು ಉಡುಪಿಯ ಸಮೀರ್ ಕಾಪು ಎಮದು ಪರಿಚಯಿಸಿಕೊಂಡಿದ್ದು, ಮಾರಾಟಕ್ಕೆ ಬಸ್ ಇರುವುದಾಗಿ ತಿಳಿಸಿದ್ದಾನೆ. ಕೆಲ ದಿನಗಳ ನಂತರ ಸೈಯದ್ ಘೌಸ್ ತಮ್ಮ ಮಗ ಸೈಯದ್ ಸಿದ್ದೀಕ್ ಬಾಷಾ ಮತ್ತು ಜಾವೇದ್ ಎಂಬ ಸ್ನೇಹಿತರೊಂದಿಗೆ ಮಲ್ಲಾರು, ಕಾಪುವಿನಲ್ಲಿರುವ ಸಮೀರ್ ನಿವಾಸಕ್ಕೆ ಭೇಟಿ ನೀಡಿದರು. ಮನೆಯಲ್ಲಿ ಅವರು ಸಮೀರ್, ಅವರ ತಂದೆ ಅಬ್ದುಲ್ ಖಾದರ್ ಮತ್ತು ಇತರರನ್ನು ಭೇಟಿಯಾದರು.
ದೂರುದಾರರು ಕೆಎ 20 ಎಎ 3039 ನೋಂದಣಿ ಸಂಖ್ಯೆಯೊಂದಿಗೆ ಬಸ್ ಅನ್ನು ಪರಿಶೀಲಿಸಿದರು, ಇದು 2017 ರ ಮಾದರಿ ಎಂದು ಸಮೀರ್ ತಿಳಿಸಿದ್ದಾರೆ. ಮಾತುಕತೆಯ ನಂತರ, ಅವರು 9,50,000 ರೂಪಾಯಿಗೆ ಬಸ್ ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡರು. ಸೈಯದ್ ಘೌಸ್ 2,00,000 ರೂಪಾಯಿಯನ್ನು ಮುಂಗಡವಾಗಿ ಪಾವತಿಸಿದರು. ಜೊತೆಗೆ ಭದ್ರತಾ ಕ್ರಮವಾಗಿ ಖಾಲಿ ಚೆಕ್ ಅನ್ನು ಹಸ್ತಾಂತರಿಸಿದರು. ಮಾತಿನಂತೆ ಉಳಿದ ಮೊತ್ತವನ್ನು 15 ದಿನಗಳ ಒಳಗೆ ಅವರು ಪಾವತಿಸುತ್ತಾರೆ. ನಂತರ ಬಸ್ ಅನ್ನು ತುಮಕೂರಿಗೆ ಕೊಂಡೊಯ್ಯಲಾಯಿತು.
ನಂತರದಲ್ಲಿ, ದೂರುದಾರರು ಆನ್ಲೈನ್ ಪಾವತಿ ಅಪ್ಲಿಕೇಶನ್ ಮೂಲಕ ಹೆಚ್ಚುವರಿ 2,80,000 ರೂಪಾಯಿಯನ್ನು ವರ್ಗಾಯಿಸಿದರು. ಜೊತೆಗೆ ಸಮೀರ್ ಮತ್ತು ಅಬ್ದುಲ್ ಖಾದರ್ ಅವರು ಹೇಳಿದಂತೆ ಆರ್ಸಿ ವರ್ಗಾವಣೆ ಮತ್ತು ಹಣಕಾಸಿನ ಸಮಸ್ಯೆಗಳನ್ನು ಇತ್ಯರ್ಥಪಡಿಸಲು 6,20,000 ರೂಪಾಯಿಯನ್ನು ನಗದು ಪಾವತಿಸಿದರು. ಈ ಮೂಲಕ ದೂರುದಾರರು ಒಟ್ಟು 9,00,000 ರೂ, ಪಾವತಿಸುತ್ತಾರೆ
ಇನ್ನು ಬಸ್ ನಿಲ್ಲಿಸಿದ್ದ ಸ್ಥಳದಿಂದ ಬಸ್ ಕಳವು ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಆರೋಪಿಗಳು ಬಸ್ ಕಳ್ಳತನ ಮಾಡಿದ್ದಾರೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಮನವಿ ಮಾಡಿದರೂ ಆರೋಪಿಗಳು ಬಸ್ ಅನ್ನು ಹಿಂದಿರುಗಿಸಲಿಲ್ಲ ಅಥವಾ ಹಣವನ್ನು ಮರುಪಾವತಿ ಮಾಡದೆ ವಂಚಿಸಿದ್ದಾರೆ ಎಂದು ಸೈಯದ್ ಘೌಸ್ ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.