ಬಂಟ್ವಾಳ, ಜ.14 (DaijiworldNews/AK): ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಡೀಸೆಲ್ ಲೋಡ್ ಟ್ಯಾಂಕರ್ ಒಂದು ಪಲ್ಟಿಯಾಗಿ ಡೀಸೆಲ್ ಸೋರಿಕೆಯಾದ ಘಟನೆ ನಡೆಯಿತು.ಘಟನೆಯಿಂದ ಗಂಟೆಗಳಿಗೂ ಅಧಿಕ ಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು.

ಟ್ಯಾಂಕರ್ ಪಲ್ಟಿಯಾದ ಘಟನೆಯಲ್ಲಿ ಚಾಲಕನಿಗೆ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾನೆ.ಮಂಗಳೂರಿನಿಂದ ಚೆನ್ನೈಗೆ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದ ಚಾಲಕ ಕಲ್ಲಡ್ಕ ಸರ್ವೀಸ್ ರೋಡ್ ನಲ್ಲಿ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಎಡವಟ್ಟು ಮಾಡಿಕೊಂಡು ಕೊನೆಗೆ ಚರಂಡಿಗೆ ಪಲ್ಟಿಯಾಗಿದೆ. ಪಲ್ಟಿಯಾದ ಕೂಡಲೇ ಟ್ಯಾಂಕರ್ ನಲ್ಲಿ ಸಣ್ಣದಾದ ತೂತು ಆಗಿದ್ದು, ಅ ಮೂಲಕ ಡಿಸೇಲ್ ಸೋರಿಕೆ ಕಂಡುಬಂದಿದೆ. ಹಾಗಾಗಿ ಕೆಲ ಹೊತ್ತು ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿತ್ತು.
ಜೊತೆಗೆ ಕಾಮಗಾರಿ ನಡೆಯುತ್ತಿದ್ದ ಕಾರಣಕ್ಕೆ ಇಲ್ಲಿ ಮೊದಲೇ ವಾಹನಗಳು ಸಂಚಾರ ಮಾಡುವುದು ಸಂಕಷ್ಟದ ಸ್ಥಿತಿಯಲ್ಲಿ. ಇದೀಗ ಲಾರಿ ಪಲ್ಟಿಯಾದ ಕಾರಣ ಸುಮಾರು ಒಂದು ಗಂಟೆಗಳ ಕಾಲ ವಾಹನಗಳು ಅಲ್ಲೇ ಬಾಕಿಯಾಗಿದ್ಧವು. ಬಳಿಕ ಸ್ಥಳದಲ್ಲಿದ್ದ ಟ್ರಾಫಿಕ್ ಎಸ್.ಐ ಸುತೇಶ್ ಅವರು ಕ್ರೇನ್ ತರಿಸಿ ಲಾರಿಯನ್ನು ಬದಿಗೆ ಸರಿಸಿದ ನಂತರ ಟ್ರಾಫಿಕ್ ಕ್ಲೀಯರ್ ಆಗಿದೆ.ಸುಮಾರು 12 ಗಂಟೆ ವೇಳೆ ಘಟನೆ ನಡೆದಿದ್ದು, ಮಧ್ಯಾಹ್ನ 1.30 ವರೆಗೆ ಟ್ರಾಫಿಕ್ ವ್ಯತ್ಯಾಸ ಕಂಡು ಬಂದಿತ್ತು.