ಮಂಗಳೂರು, ಜ.15(DaijiworldNews/AK): ಪಣಂಬೂರಿನ ಎನ್ಎಂಪಿಟಿ ಹಳೆ ಟ್ರಕ್ ಯಾರ್ಡ್ ಬಳಿ ಮಾದಕ ವಸ್ತು ಹಾಗೂ ಅಪಾಯಕಾರಿ ಆಯುಧ ಹಿಡಿದುಕೊಂಡ ವ್ಯಕ್ತಿಯೊಬ್ಬನನ್ನು ಖಚಿತ ಮಾಹಿತಿ ಮೇರೆಗೆ ಪಣಂಬೂರು ಪೊಲೀಸರು ಬಂಧಿಸಿದ್ದಾರೆ.



ಪಂಪ್ಹೌಸ್ಗೆ ಹೋಗುವ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಾದಕ ದ್ರವ್ಯ ಮತ್ತು ತಲವಾರು ಹಿಡಿದುಕೊಂಡು ಓಡಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಣಂಬೂರು ಪಿಎಸ್ಐ ಶ್ರೀಖಲಾ ಕೆ.ಟಿ ಮತ್ತು ತಂಡ ಜ.15ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಳಿ ನಡೆಸಿತ್ತು.
ಮಂಗಳೂರು ನಗರ ಉತ್ತರ ಎಸಿಪಿ ಶ್ರೀಕಾಂತ್ ಕೆ ಮತ್ತು ಪಣಂಬೂರು ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರಿನ ಕಸಬಾ ಬೇಂಗ್ರೆ ನಿವಾಸಿ ಮಟನ್ ಫಾರೂಕ್ (32) ಎಂಬ ಉಮರ್ ಫಾರೂಕ್ ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿಯಿಂದ 4,000 ಮೌಲ್ಯದ 1.72 ಗ್ರಾಂ ಮೆಥಾಂಫೆಟಮೈನ್ ಮತ್ತು ಅಪಾಯಕಾರಿ ಆಯುಧ (ತಲವಾರು) ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ 1985 ರ ಎನ್ಡಿಪಿಎಸ್ ಕಾಯಿದೆ ಸೆಕ್ಷನ್ 8 (ಸಿ) ಮತ್ತು 22 (ಎ) ಅಡಿಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 4 ಮತ್ತು 25 (1-ಬಿ) (ಬಿ) ಜೊತೆಗೆ ಪ್ರಕರಣ ದಾಖಲಾಗಿದೆ.
ಆರೋಪಿ ಉಮರ್ ಫಾರೂಕ್ ಪಣಂಬೂರು, ಕಂಕನಾಡಿ ಟೌನ್, ಉಳ್ಳಾಲ, ಮಂಗಳೂರು ದಕ್ಷಿಣ, ಪೂರ್ವ ಹಾಗೂ ದಕ್ಷಿಣ ಕನ್ನಡದ ಉಪ್ಪಿನಂಗಡಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಯಗಟಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಂಬತ್ತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ. ಈತನ ವಿರುದ್ಧ ಉಪ್ಪಿನಂಗಡಿ ಮತ್ತು ಕಂಕನಾಡಿ ಟೌನ್ ಪೊಲೀಸ್ ಠಾಣೆಗಳಲ್ಲಿ ವಾರಂಟ್ ಬಾಕಿ ಇದ್ದು, ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ.
ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಐಪಿಎಸ್, ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಸಿದ್ಧಾರ್ಥ್ ಗೋಯೆಲ್ ಐಪಿಎಸ್ ಮತ್ತು ಡಿಸಿಪಿ (ಅಪರಾಧ ಮತ್ತು ಸಂಚಾರ) ರವಿಶಂಕರ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆಯನ್ನು ನಡೆಸಲಾಯಿತು. ತಂಡದಲ್ಲಿ ಎಸಿಪಿ ಶ್ರೀಕಾಂತ್ ಕೆ, ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್, ಪಿಎಸ್ಐಗಳಾದ ಶ್ರೀಖಾಲಾ ಕೆಟಿ ಮತ್ತು ಜ್ಞಾನಶೇಖರ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಚ್ಸಿ ಪ್ರೇಮಾನಂದ, ಸೈಯದ್ ಇಂತಿಯಾಜ್, ಜೇಮ್ಸ್, ಕಾನ್ಸ್ಟೆಬಲ್ಗಳಾದ ರಾಕೇಶ್ ಎಲ್ ಎಂ, ಫಕೀರಶ್, ಬಸವರಾಜ ಗುರಿಕಾರ, ಶರಣಪ್ಪ ಗೊಲ್ಲರ ಇದ್ದರು. ಹೆಚ್ಚಿನ ತನಿಖೆ ನಡೆಯುತ್ತಿದೆ.