ಉಡುಪಿ, ಜ.16 (DaijiworldNews/AA): ನಿಗದಿತ ಗಡುವು ಮುಗಿದರೂ ಕೂಡ ಇನ್ನೂ ಕಾಮಗಾರಿ ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ 169A ರಲ್ಲಿರುವ ಇಂದ್ರಾಳಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಅವರು ಪರಿಶೀಲಿಸಿದರು.


ಏಳು ವರ್ಷಗಳ ಹಿಂದೆ ಆರಂಭವಾದ ಇಂದ್ರಾಳಿ ಸೇತುವೆ ನಿರ್ಮಾಣವು ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿತ್ತು. ಇದರಿಂದಾಗಿ ಗುತ್ತಿಗೆದಾರರು ಜನವರಿ 15 ರೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಲಿಖಿತ ಭರವಸೆ ನೀಡಿದ್ದರು. ಆದಾಗ್ಯೂ, ಬುಧವಾರ ಗಡುವು ಮುಗಿದರೂ ಕೂಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಅವರು, ಕಾಮಗಾರಿ ಪ್ರಗತಿಯಲ್ಲಿದೆ, ಆದರೆ ಹೆಚ್ಚುವರಿ ಜೆಸಿಬಿಗಳನ್ನು ನಿಯೋಜಿಸಲು ಸ್ಥಳಾವಕಾಶದ ಕೊರತೆ ಮತ್ತು ಸಮೀಪದ ವಿದ್ಯುತ್ ತಂತಿಗಳು ಮತ್ತು ವಾಹನಗಳ ಸಂಚಾರದಿಂದ ಉಂಟಾಗುವ ಸವಾಲುಗಳಿಂದಾಗಿ ಕಾರ್ಯನಿರ್ವಹಣೆಯು ಎಚ್ಚರಿಕೆಯಿಂದ ಮತ್ತು ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ಅಡೆತಡೆಗಳ ಹೊರತಾಗಿಯೂ, ಒಂದು ತಿಂಗಳ ಒಳಗೆ ಯೋಜನೆಯನ್ನು ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮುಂದುವರಿದು, ಗರ್ಡರ್ ಅಳವಡಿಕೆ ಪ್ರಕ್ರಿಯೆಗೆ ಇನ್ನೂ 10 ದಿನಗಳ ಕಾಲಾವಕಾಶ ಬೇಕಾಗಲಿದ್ದು, ನಂತರ ಸೇತುವೆ ಜೋಡಣೆ ಕೈಗೊಳ್ಳಲಾಗುವುದು. ಅಳವಡಿಕೆ ಸಮಯದಲ್ಲಿ, ರೈಲು ಸಂಚಾರವನ್ನು ಒಂದು ದಿನ ನಿಲ್ಲಿಸಬೇಕಾಗುತ್ತದೆ ಮತ್ತು ಪ್ರದೇಶದಲ್ಲಿನ ವಿದ್ಯುತ್ ಸರಬರಾಜನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗುತ್ತದೆ. ಈ ಅಗತ್ಯತೆಗಳಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಗೆ ಪತ್ರವ್ಯವಹಾರವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.