ಕಾರ್ಕಳ, ಜ.16 (DaijiworldNews/AK): ಕಾರ್ಕಳದ ಸಮಗ್ರ ಅಭಿವೃದ್ಧಿಯು ನಿರಂತರವಾಗಿ ನಡೆಯಬೇಕು.ಇದಕ್ಕೆ ಪೂರಕವಾಗಿ ಸೌಂದರ್ಯಕರಣ ಹಾಗೂ ಮೂಲ ಸೌಕರ್ಯಗಳು ಹಂತ ಹಂತವಾಗಿ ಪ್ರಗತಿಯತ್ತ ಸಾಗಬೇಕು. ನಾಗರಿಕರಿಗೆ ಸದ್ಬಾಳಕೆಯಾಗುವ ರೀತಿಯಲ್ಲಿ ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ಶಾಸಕ ವಿ.ಸುನೀಲ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.


ಅಮೃತ ನಗರೋತ್ಥಾನ ಯೋಜನೆಯಡಿ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ರೂ. 97.31 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಕೋಟಿ ಚೆನ್ನಯ ಥೀಂ ಪಾರ್ಕ್ ನಲ್ಲಿ ಏರ್ಪಡಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಗರ ಪ್ರದೇಶದ ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ನಗರದ ಭಾಗದಿಂದ ಒಂದಿಷ್ಟು ದೂರದಲ್ಲಿ ಇದ್ದ ಪ್ರದೇಶದಲ್ಲಿ ಕೋಟಿ ಚೆನ್ನಯ್ಯ ಥೀಂ ಪಾಕ್೯ ನಿರ್ಮಿಸಲಾಗಿತ್ತು. ಅಭಿವೃದ್ಧಿಗೆ ಪೂರಕವಾಗಿ ಯಕ್ಷ ರಂಗಾಯಣ, ಸ್ಟೇಡಿಯಂ, ಈಜುಕೊಳ ಹೀಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಲಾಗಿದೆ. ಈ ಪ್ರದೇಶದ ಪಕ್ಕದಲ್ಲಿ ಇರುವ ಅರಣ್ಯ ಇಲಾಖೆಯ ಅಧೀನಕ್ಕೊಳಪಡುವ ಜಾಗದ ಅಭಿವೃದ್ಧಿ ಗಾಗಿ ಸುಮಾರು ರೂ. 1 ಕೋ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರು.
ಕೆಲ ಯೋಜನೆಗಳು ಆರಂಭ ಘಟ್ಟದಲ್ಲಿ ಮುಗ್ಗರಿಸುತ್ತದೆಯಾದರೂ,ಮತ್ತೇ ವೇಗ ಪಡೆದುಕೊಳ್ಳುತ್ತದೆ ಎಂಬುವುದಕ್ಕೆ ಇಲ್ಲಿನ ಈಜು ಕೊಳವೇ ಸಾಕ್ಷಿಯಾಗಿದೆ. ಇತ್ತೀಚೆಗೆ ನಡೆದ ಈಜು ಸ್ವರ್ಧೆಯಲ್ಲಿ ಸುಮಾರು 500 ಮಂದಿ ಸ್ವರ್ಧಾಳುಗಳು ಪಾಲ್ಗೊಂಡಿರುವುದು ಗಮನಾರ್ಹವೆಂದರು.
ಇದೇ ಸಂದರ್ಭದಲ್ಲಿ ಕೋಟಿ ಚೆನ್ನಯ್ಯ ಥೀಂ ಪಾಕ್ ೯ ಅಭಿವೃದ್ಧಿಯ ನಿಟ್ಟಿನಲ್ಲಿ ಸಾಂಕೇತಿಕವಾಗಿ ಗಿಡಗಳನ್ನು ನೆಟ್ಟರು.
ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್ ಮತನಾಡಿ ಬಯಲು ರಂಗಮಂಟಪ, ಧ್ವನಿ ವರ್ಧಕ ಹಾಗೂ ವಿದ್ಯುತ್ ದೀಪಲಂಕಾರದ ಅಭಿವೃದ್ಧಿಗೆ ಸರಕಾರದ ಜೊತೆಗೆ ಸಾರ್ವಜನಿಕ ಸಂಘ-ಸಂಸ್ಥೆಗಳು ಮುಂದಾಗಬೇಕೆಂದರು.
ಕಾಮಗಾರಿಗಳ ವಿವರ
1. ಕೋಟಿ-ಚೆನ್ನಯ ಥೀಂ ಪಾರ್ಕ್ ಅಭಿವೃದ್ಧಿ
2. ಕಾರ್ಕಳ ಬಂಗ್ಲೆಗುಡ್ಡೆ ಬಳಿ ಸಮುದಾಯ ಭವನ ನಿರ್ಮಾಣ
3. ದಾನಶಾಲೆ ಸಮುದಾಯ ಭವನಕ್ಕೆ ಮೇಲ್ಟಾವಣೆ
4. ರಣವೀರ ಕಾಲನಿ ಸಮುದಾಯ ಭವನಕ್ಕೆ ಮೇಲ್ಲಾವಣಿ
5. ಆನೆಕೆರೆ ಉದ್ಯಾನವನ ಅಭಿವೃದ್ಧಿ
6. ಕ್ವೆಸ್ಟ್ ಕಿಂಗ್-ಗಾಂಧಿ ಮೈದಾನ ರಸ್ತೆ, ವಿ. ಆರ್.ಎಲ್. ಆಫಿಸು ಬಳಿ ಚರಂಡಿ ನಿರ್ಮಾಣ
ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಸ್ಥಾಯೀ ಸಮಿತಿಯ ಅಧ್ಯಕ್ಷ ಪ್ರದೀಪ್ ರಾಣೆ, ಪುರಸಭಾ ಕೌನ್ಸಿಲರ್ ವಿನ್ನಿಬೋಲ್ಡ್ ಮೆಂಡೋನ್ಸಾ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್
ಮೊದಲಾದವರು ಉಪಸ್ಥಿತರಿದ್ದರು.