ಕಾರ್ಕಳ, ಜ.16 (DaijiworldNews/AK):ಶಿರ್ಲಾಲು ಗ್ರಾ. ಪಂ. ವ್ಯಾಪ್ತಿಯ ಜಾರ್ಕಳ ಮುಂಡ್ಲಿಯಲ್ಲಿ ಜನವರಿ ೧೪ರ ರಾತ್ರಿ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮಕ್ಕೆ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆದಿಲ್ಲ ಎಂದು ಹೇಳಿ ಕಾರ್ಯಕ್ರಮವನ್ನು ನಿಲ್ಲಿಸಲು ಸೂಚಿಸಿದ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಪ್ರತಿ ವರ್ಷದಂತೆ ಇಲ್ಲಿ ಸ್ಥಳೀಯರ ತಂಡದ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಆದರೆ ಈ ವರ್ಷ ಅಗತ್ಯ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಕಾರ್ಯಕ್ರಮ ನಿಲ್ಲಿಸಲು ಸೂಚಿಸಿದರು.
ಇದನ್ನು ವಿರೋಧಿಸಿದ ಗ್ರಾಮಸ್ಥರು, ಇಲ್ಲಿ ಕಲಾಪ್ರದರ್ಶನ ನಡೆಯುತ್ತಿದೆ. ಇದರಿಂದ ಯಾರಿಗೂ ಸಮಸ್ಯೆ ಇಲ್ಲ ಎಂದು ಯಕ್ಷಗಾನವು ಬೆಳಗ್ಗೆವರೆಗೂ ನಡೆಯಿತು. ಪೊಲೀಸರೊಂದಿನ ಮಾತಿನ ಚಕಮಕಿಯ ದೃಶ್ಯಗಳು ವೈರಲ್ ಆಗಿದ್ದು, ಪೊಲೀಸರ ನಡೆಗೆ ಟೀಕೆ ವ್ಯಕ್ತವಾಗಿದೆ. ಕಾರಣಾಂತರಗಳಿಂದ ಧ್ವನಿ ವರ್ಧಕಗಳ ಬಳಕೆಗೆ ಅನುಮತಿ ಪಡೆದಿರಲಿಲ್ಲ. ಹಾಗಾಗಿ ಪೊಲೀಸರು ಕಾರ್ಯಕ್ರಮವನ್ನು ಸ್ಥಗಿತ ಗೊಳಿಸಲು ಸೂಚಿಸಿದ್ದರು. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದಾಗ ಅಧ್ಯಕ್ಷರನ್ನು ಬಂಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರು.
ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು, ಅಧ್ಯಕ್ಷರನ್ನು ಮಾತ್ರವಲ್ಲ ಗ್ರಾಮಸ್ಥರೆಲ್ಲರನ್ನೂ ಬಂಧಿಸಿ ಎಂದರು. ಪೊಲೀಸರು ಮೊದಲು ನೀಡಿದ ನೋಟಿಸ್ನಲ್ಲಿ ಕಾರ್ಯಕ್ರಮದ ವಿರುದ್ಧ ಕೆಲವರು ದೂರು ನೀಡಿದ್ದಾರೆ ಎಂದು ತಿಳಿಸಿದ್ದರು. ಎಫ್ಐಆರ್ನಲ್ಲಿ ಇದರ ಉಲ್ಲೇಖವಿಲ್ಲ. ಪೊಲೀಸರು ಗಸ್ತು ತಿರುಗುತ್ತಿದ್ದಾಗ ಅನುಮತಿ ಇಲ್ಲದೆ ಯಕ್ಷಗಾನ ಪ್ರದರ್ಶನ ಆಗುತ್ತಿರುವುದು ಕಂಡುಬಂತು ಎಂದು ಉಲ್ಲೇಖಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈಶ್ವರ ಯಕ್ಷಗಾನ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಹಾಗೂ ಮಹಾಲಕ್ಷ್ಮೀ ಸೌಂಡ್ಸ್ ಮಾಲಕ ಅಪ್ಪು ವಿರುದ್ದ ಪ್ರಕರಣ ದಾಖಲಿಸಲಾಗಿದೆ. ರಾತ್ರಿ 11.30 ಗಂಟೆಗೆ ಪೊಲೀಸರು ಧ್ವನಿವರ್ಧಕವನ್ನು ಬಳಸದಂತೆ ತಿಳಿಸಿದರೂ ಅದನ್ನು ನಿರಾಕರಿಸಿ ಬೆಳಗ್ಗೆ 4.30ರ ವರೆಗೂ ಕಾರ್ಯಕ್ರಮ ನಡೆಸಲಾಗಿದೆ. ಹೀಗಾಗಿ ಆಯೋಜಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಾರ್ಯಕ್ರಮಕ್ಕೆ ಅನುಮತಿ ಕೋರಿ ಕೆಲವು ದಿನಗಳ ಮೊದಲೇ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರೂ ಪಿಡಿಒ ರಜೆಯಲ್ಲಿರುವುದಾಗಿ ಹೇಳಿ ಅನುಮತಿ ನೀಡಿರಲಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.
ಯಕ್ಷಗಾನ ಪ್ರದರ್ಶನಕ್ಕೆ ಈ ರೀತಿ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ದಾಳಿ ನಡೆಸುವುದು ಖೇದಕರ. ಹೀಗಾದರೆ ಮುಂದೆ ನಮ್ಮ ಸಂಸ್ಕೃತಿಯ ಯಾವುದೇ ಕಾರ್ಯಕ್ರಮ ನಡೆಸುವುದು ಕಷ್ಟವಾಗಬಹುದು ಎಂದು ಯಕ್ಷಗಾನ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.