ಕಾಸರಗೋಡು, ಜ.17 (DaijiworldNews/AA): ಪತಿ ಮೃತಪಟ್ಟು ಗಂಟೆಗಳೊಳಗೆ ಪತ್ನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಡೂರು ಎಂಬಲ್ಲಿ ನಡೆದಿದೆ.

ಬಾಡೂರು ಪದವಿನ ಸಂಜೀವ (55) ಮತ್ತು ಪತ್ನಿ ಸುಂದರಿ (50) ಮೃತಪಟ್ಟವರು.
ಸಂಜೀವ ಗುರುವಾರ ಮಧ್ಯಾಹ್ನ ಉದ್ಯೋಗ ಖಾತರಿ ಕೆಲಸ ನಿರ್ವಹಿಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರ ಜೀವ ಉಳಿಸಲಾಗಲಿಲ್ಲ. ಸಂಜೀವ ಅವರ ಮೃತದೇಹವನ್ನು ರಾತ್ರಿ ಮನೆಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಯಿತು. ರಾತ್ರಿ ಎರಡು ಗಂಟೆ ಸುಮಾರಿಗೆ ಸುಂದರಿ ಕುಸಿದು ಬಿದ್ದಿದ್ದು, ಕೂಡಲೇ ಕುಂಬಳೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಮುಂಜಾನೆ ವೇಳೆಗೆ ಮೃತಪಟ್ಟಿದ್ದಾರೆ.
ಸುಂದರಿ ಸಮೀಪದ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.