ಕಡಬ, ಜ.18 (DaijiworldNews/AA): ಸವಾರನ ನಿಯಂತ್ರಣ ತಪ್ಪಿ ಬೈಕ್ ಮೋರಿಗೆ ಬಿದ್ದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಧರ್ಮಸ್ಥಳ - ಮರ್ಧಾಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇರಡ್ಕ ಸಮೀಪದ ಗರ್ಗಾಸ್ಪಾಲ್ನಲ್ಲಿ ಶುಕ್ರವಾರ ನಡೆದಿದೆ.

ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಅವರ ಪುತ್ರ ಆಶಿಷ್ (16) ಮೃತ ವಿದ್ಯಾರ್ಥಿ. ಆಶಿಷ್ ಪೇರಡ್ಕದ ಖಾಸಗಿ ವಿದ್ಯಾಸಂಸ್ಥೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೃತ ಆಶಿಷ್ ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.
ಆಶಿಷ್ ಬೆಳಗ್ಗೆ ಮನೆಯಿಂದ ಶಾಲೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳೀಯ ನಿವಾಸಿ ಶ್ರೀಧರ ಅವರು ಕೂಡಲೇ ಆತನನ್ನು ಮೇಲಕ್ಕೆತ್ತಿ ಕಡಬದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಸಂಭವಿಸಿದ ಸ್ಥಳದಲ್ಲಿ ಮೋರಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ವಾಹನ ಚಲಾಯಿಸುವ ಅಪ್ರಾಪ್ತರ ವಿರುದ್ಧ ಹಾಗೂ ಅಪ್ರಾಪ್ತ ವಯಸ್ಕರಿಗೆ ವಾಹನಗಳನ್ನು ಒದಗಿಸುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಸೂಚನೆ ನೀಡಿದ್ದಾರೆ.