ಉಡುಪಿ, ಜ.18 (DaijiworldNews/AA): ಕಲ್ಸಂಕ ವೃತ್ತದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಉಡುಪಿ ನಗರಕ್ಕೆ ತೆರಳುವ ಅಂಬಾಗಿಲು-ಗುಂಡಿಬೈಲು ಮಾರ್ಗವನ್ನು ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಜಿಲ್ಲಾಡಳಿತವು ತಕ್ಷಣವೇ ಈ ರಸ್ತೆಯನ್ನು ವಾಹನ ಸಂಚಾರಕ್ಕಾಗಿ ಮುಕ್ತಗೊಳಿಸಿ ಮೂಲ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಒತ್ತಾಯಿಸಿದ್ದಾರೆ.

ಅಂಬಾಗಿಲು-ಗುಂಡಿಬೈಲು ಮಾರ್ಗದಿಂದ ಉಡುಪಿ ನಗರಕ್ಕೆ ಪ್ರವೇಶಿಸುವ ವಾಹನಗಳನ್ನು ಈಗ ಕಡಿಯಾಳಿ ಪ್ರದೇಶದ ಮೂಲಕ ಮರುರ್ನಿರ್ದೇಶಿಸಲಾಗುತ್ತಿದೆ. ಇದರಿಂದಾಗಿ ನಗರದ ಇತರ ಭಾಗಗಳಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಈ ಅವೈಜ್ಞಾನಿಕ ಕ್ರಮದಿಂದ ದೈನಂದಿನ ವಾಹನ ಸಂಚಾರಕ್ಕೆ ಅಡ್ಡಿಪಡಿಯುಂಟಾಗಿದ್ದು, ನಿವಾಸಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಂಬಾಗಿಲು-ಗುಂಡಿಬೈಲು ರಸ್ತೆಯನ್ನು ಮುಚ್ಚುವುದರಿಂದ ನಗರಾದ್ಯಂತ ವಾಹನ ದಟ್ಟಣೆ ಉಂಟಾಗಿದೆ. ಇದು ದಿನನಿತ್ಯದ ಕೆಲಸಕ್ಕೆ ತೆರಳುವ ಜನರು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಉಡುಪಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.
ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ರಸ್ತೆಗಳನ್ನು ಮುಚ್ಚುವುದು ಪರಿಹಾರವಲ್ಲ. ಬದಲಾಗಿ ಕಲ್ಸಂಕ ಜಂಕ್ಷನ್ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ಗಳನ್ನು ಅಳವಡಿಸಲು ಪ್ರಸ್ತಾಪಿಸಿದರು. ಇದು ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ನಗರದ ಪ್ರಮುಖ ಸ್ಥಳಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಲ್ಸಂಕ ಜಂಕ್ಷನ್ನಲ್ಲಿ ಸಿಗ್ನಲ್ಗಳ ಅಳವಡಿಕೆಯನ್ನು ತ್ವರಿತಗೊಳಿಸುವಂತೆ ಅವರು ಆಡಳಿತವನ್ನು ಒತ್ತಾಯಿಸಿದರು.
ರಸ್ತೆ ಬಂದ್ ಮಾಡಿರುವುದು ಸಂಚಾರ ಪೊಲೀಸರ ಕೆಲಸದ ಹೊರೆಯನ್ನು ಕಡಿಮೆ ಮಾಡಿದೆ ಆದರೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಹೆಚ್ಚಾಗಿದೆ. ಜನರ ಹಿತದೃಷ್ಟಿಯಿಂದ ಅಂಬಾಗಿಲು-ಗುಂಡಿಬೈಲು ರಸ್ತೆಯಲ್ಲಿನ ಬ್ಯಾರಿಕೇಡ್ಗಳನ್ನು ತಕ್ಷಣ ತೆರವುಗೊಳಿಸಬೇಕು. ಕಲ್ಸಂಕ ಜಂಕ್ಷನ್ನಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ಗಳನ್ನು ಅಳವಡಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.