ಸುಳ್ಯ, ಜೂ 11 (Daijiworld News/MSP): ಸುಳ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಲಂಚ ಪಡೆದುಕೊಳ್ಳುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪ ಹೊತ್ತಿರುವ ಅಧಿಕಾರಿಯ ಅಮಾನತಿಗೆ ಡಿಸಿಗೆ ಸೂಚಿಸಲಾಗುವುದು ಎಂದು ಶಾಸಕ ಎಸ್. ಅಂಗಾರ ಹೇಳಿದ್ದಾರೆ.
ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಜಿಲ್ಲಾ ನೋಂದಣಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. ಅಧಿಕಾರಿ ವಿರುದ್ದ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ರಾಜ್ಯ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರನ್ನು ಆಗ್ರಹಿಸಲಾಗಿದೆ. ಘಟನೆ ಬಗ್ಗೆ ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ ಎಡಮಲೆ ಅವರು ಆಯುಕ್ತರಿಗೆ ದೂರು ನೀಡಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.