ಮಂಗಳೂರು, ಜ.20 (DaijiworldNews/AA): ನಗರದ ತಣ್ಣೀರುಬಾವಿ ಬೀಚ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಎರಡನೇ ದಿನ ಅನಿರೀಕ್ಷಿತ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಗಾಳಿಪಟ ಹಾರಾಟಕ್ಕೆ ತುಸು ಅಡ್ಡಿಯಾಗಿದ್ದು, ನೆರೆದಿದ್ದವರಲ್ಲಿ ನಿರಾಸೆ ಮೂಡಿಸಿತು.
























ಜನವರಿ 18 ಮತ್ತು 19 ರಂದು ನಡೆದ ಉತ್ಸವದಲ್ಲಿ 22 ಕ್ಕೂ ಹೆಚ್ಚು ದೇಶ ವಿದೇಶದಿಂದ ಬಂದ ಗಾಳಿಪಟ ಹಾರಾಟದ ತಜ್ಞರು ಮೊದಲ ದಿನದಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ದುರದೃಷ್ಟವಶಾತ್, ಎರಡನೇ ದಿನ ಮಳೆಯು ಗಾಳಿಪಟ ಉತ್ಸವಕ್ಕೆ ಅಡ್ಡಿಪಡಿಸಿತು. ಹೀಗಾಗಿ ಗಾಳಿಪಟ ಹಾರಿಸುವ ದೃಶ್ಯವನ್ನು ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕರಿಗೆ ನಿರಾಶೆ ಉಂಟಾಯಿತು.
2ನೇ ದಿನ ಸಂಜೆ ಮೂರು ಗಂಟೆಯವರೆಗೆ ಗಾಳಿ ಪಟ ಹಾರಾಟಕ್ಕೆ ಪೂರಕವಾದ ಗಾಳಿಯ ವೇಗ ಇತ್ತು ಬಳಿಕ ಇದ್ದಕ್ಕಿದ್ದಂತೆ ಮೋಡ ಕವಿದು ಸುರಿದ ಮಳೆಯಿಂದಾಗಿ ಉತ್ಸವಕ್ಕೆ ಅಡ್ಡಿಯುಂಟಾಯಿತು. ಆದರೂ ಮುಸ್ಸಂಜೆಯ ವೇಳೆಗೆ ಗಾಳಿಪಟ ಹಾರಾಟದ ತಜ್ಞರು ತಮ್ಮ ಗಾಳಿ ಪಟಗಳನ್ನು ಮೇಲಕ್ಕೆ ಹಾರಿಸಲು ಪ್ರಯತ್ನಿಸಿದರು.
ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಣ್ಣೀರಭಾವಿ ಬೀಚ್ ಗೆ ಭೇಟಿ ನೀಡಿ ಗಾಳಿಪಟ ಹಾರಿಸುವವರೊಂದಿಗೆ ಸಂವಾದ ನಡೆಸಿ, ಅವರ ಪ್ರದರ್ಶನ ಹಾಗೂ ಮಂಗಳೂರು ನೀಡಿದ ಆತ್ಮೀಯ ಆತಿಥ್ಯವನ್ನು ಶ್ಲಾಘಿಸಿದರು.