ಕಾಸರಗೋಡು, ಜ.20 (DaijiworldNews/AK): ಪೈವಳಿಕೆ ಸಮೀಪದ ಕಾಯರ್ ಕಟ್ಟೆಯಲ್ಲಿ ಟಿಪ್ಪರ್ ಚಾಲಕ ಬಾಯಾರುಪದವಿನ ಮುಹಮ್ಮದ್ ಆಸೀಫ್ (29) ರವರ ನಿಗೂಢ ಸಾವಿನ ಪ್ರಕರಣದ ವಿಚಾರಣೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಿ ರಾಜ್ಯ ಸರಕಾರ ಆದೇಶ ನೀಡಿದೆ.

ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸುವಂತೆ ಆಸೀಫ್ ರವರ ತಾಯಿ ಮುಖ್ಯ ಮಂತ್ರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದರಂತೆ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಿ ಅದೇಶ ನೀಡಲಾಗಿದೆ. ಮಂಜೇಶ್ವರ ಪೊಲೀಸರು ಆರಂಭಿಕ ತನಿಖೆ ನಡೆಸಿದ್ದರು.
ಕಳೆದ ಬುಧವಾರ ಮುಂಜಾನೆ ಕಾಯರ್ ಕಟ್ಟೆ ಯ ರಸ್ತೆ ಬದಿ ಟಿಪ್ಪರ್ ಲಾರಿಯಲ್ಲಿ ಆಸೀಫ್ ಮೃತಪಟ್ಟ ಸ್ಥಿತಿ ಯಲ್ಲಿ ಪತ್ತೆಯಾಗಿದ್ದರು. ಲಾರಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬೆನ್ನಿನ ಮೂಳೆ ಮುರಿತ ಕ್ಕೊಳಗಾದ ಬಗ್ಗೆ ತಿಳಿದು ಬಂದಿತ್ತು. ಆದರೆ ಬೆನ್ನ ಮೂಳೆ ಮುರಿತಕ್ಕೆ ಕಾರಣ ದ ಬಗ್ಗೆ ಪೊಲೀಸರು ತನಿಖೆ ನಡೆಸಿದರೂ ಪತ್ತೆ ಹಚ್ಚಲು ಸಾಧ್ಯ ವಾಗಲಿಲ್ಲ. ಈ ಸಾವಿನ ಬಗ್ಗೆ ಹಲವು ಅನುಮಾನಗಳು ಉಂಟಾಗಿರುವ ಹಿನ್ನಲೆಯಲ್ಲಿ ಸೂಕ್ತ ತನಿಖೆಗೆ ಕುಟುಂಬಸ್ಥರು ಹಾಗೂ ಹಲವು ರಾಜಕೀಯ ಪಕ್ಷಗಳು ಒತ್ತಡ ಹೇರಿದ್ದವು. ಇದರಂತೆ ತನಿಖೆಯನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿದೆ.