ಉಳ್ಳಾಲ, ಜ.21 (DaijiworldNews/AA): ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಯೊಬ್ಬ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಆತನಿಗೆ ಗುಂಡು ಹಾರಿಸಿದ ಘಟನೆ ಮಂಗಳವಾರ ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ನಡೆದಿದೆ.






ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಜನವರಿ 20ರಂದು ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರ ತಂಡ ಮೂವರು ಆರೋಪಿಗಳನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿತ್ತು. ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದ ಅಮ್ಮಕೋವಿಲ್ ನಿವಾಸಿ ಮುರುಗಂಡಿ ಥೇವರ್ (36), ಮುಂಬಯಿಯ ಡೊಂಬಿವಿಲಿ ಪಶ್ಚಿಮ ಗೋಪಿನಾಥ್ ಚೌಕ್ ರಾಮ್ಕಾಭಾಯಿ ನಿವಾಸಿ ಯೋಸುವಾ ರಾಜೇಂದ್ರನ್ (35) ಮತ್ತು ಮುಂಬಯಿ ಚೆಂಬೂರು ತಿಲಕ್ನಗರ ನಿವಾಸಿ ಕಣ್ಣನ್ ಮಣಿ (36) ಬಂಧಿತ ಆರೋಪಿಗಳು.
ಬಂಧಿತರನ್ನು ಮಂಗಳೂರಿಗೆ ಕರೆತರಲಾಗಿದ್ದು ವಿಚಾರಣೆ ನಡೆಸಲಾಗುತ್ತಿತ್ತು. ಉಳ್ಳಾಲ ಠಾಣೆಯ ಠಾಣಾಧಿಕಾರಿ ಬಾಲಕೃಷ್ಣ ಎಚ್.ಎನ್. ಮತ್ತು ತನಿಖಾ ತಂಡದ ಸದಸ್ಯರ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡುವ ವೇಳೆ ಆರೋಪಿ ಕಣ್ಣನ್ ಮಣಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಆರೋಪಿ ಕಣ್ಣನ್ ಮಣಿ ಸ್ಥಳದಲ್ಲಿ ದೊರೆತ ಮುರಿದ ಬಿಯರ್ ಬಾಟಲಿಯನ್ನು ಬಳಸಿ ಬೆಂಗಾವಲು ಸಿಬ್ಬಂದಿ ಅಂಜನಪ್ಪ ಮತ್ತು ನಿತಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ಆರೋಪಿಯು ತನಿಖಾಧಿಕಾರಿ ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ರನ್ನು ತಳ್ಳಿ, ಅವರಿಗೆ ಇರಿದು ಕೊಲ್ಲಲು ಯತ್ನಿಸಿದ್ದಾನೆ. ಜೊತೆಗಿದ್ದ ಸಿಸಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಿದ ಎಚ್ಚರಿಸಿದರೂ, ಆರೋಪಿಯು ತನ್ನ ಹಲ್ಲೆಯನ್ನು ಮುಂದುವರೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ಉಳ್ಳಾಲ ಪಿ.ಎಸ್. ಇನ್ಸ್ಪೆಕ್ಟರ್ ಬಾಲಕೃಷ್ಣ, ಸಿಸಿಬಿ ಘಟಕದ ಪಿ.ಸಿ. ಅಂಜನಪ್ಪ ಮತ್ತು ಉಳ್ಳಾಲ ಪಿ.ಎಸ್. ಪಿ.ಸಿ. ನಿತಿನ್ ಅವರಿಗೆ ಗಾಯಗಳಾಗಿವೆ.
ಗಾಯಗೊಂಡ ಸಿಬ್ಬಂದಿ ಮತ್ತು ಆರೋಪಿಯನ್ನು ತಕ್ಷಣವೇ ಚಿಕಿತ್ಸೆಗಾಗಿ ದೇರಳಕಟ್ಟೆ ಯೇನಪೋಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.