ಉಳ್ಳಾಲ ಡಿ 3 : ಅಪಾಯದಂಚಿನಲ್ಲಿರುವ ಮನೆಗಳ ಸಂರಕ್ಷಣೆಗೆ ತಾತ್ಕಾಲಿಕ ಕಾಮಗಾರಿ ಶೀಘ್ರವೇ ನಡೆಸಲಾಗುವುದು ಎಂದು ಸಚಿವ ಖಾದರ್ ಹೇಳಿದ್ದಾರೆ.
ಅವರು ಓಖಿ ಚಂಡಾಮಾರುತದ ಪರಿಣಾಮ ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಹಾನಿಗೀಡಾದ ಪ್ರದೇಶಕ್ಕೆ ಡಿ 3ರ ಭಾನುವಾರ ಭೇಟಿ ನೀಡಿ ಮಾತನಾಡಿದರು.
ತಮಿಳುನಾಡು, ಕೇರಳ ಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಓಖಿ ಚಂಡಾಮಾರುತದ ಪರಿಣಾಮ ಉಳ್ಳಾಲ ವ್ಯಾಪ್ತಿಯಲ್ಲಿಯೂ ಹಲವು ಮನೆಗಳಿಗೆ ಹಾಗೂ ಸೊತ್ತುಗಳಿಗೆ ಹಾನಿಯಾಗಿದೆ.ಆದರೆ ಭಗವಂತನ ಕೃಪೆಯಿಂದ ಬೇರೆ ರಾಜ್ಯಗಳಿಗೆ ಹೊಲೀಸಿದರೆ ಇಲ್ಲಿ ಕಡಿಮೆ ಪ್ರಮಾಣದಲ್ಲಿ ಆಗಿದೆ. ಫೋರ್ ಕಾಸ್ಟ್ ಮಾಹಿತಿ ಪ್ರಕಾರ ಚಂಡಾಮಾರುತದ ಪ್ರಭಾವ ಇನ್ನಷ್ಟು ಕಡಿಮೆಯಾಗಲಿದೆ ಅನ್ನುವ ಮಾಹಿತಿ ದೊರೆತಿದೆ. ಉಳ್ಳಾಲ ಭಾಗದಲ್ಲಿ ಆತಂಕಿತರಾದ ಜನತೆಗೆ ಜಿಲ್ಲಾಡಳಿತ ನಿನ್ನೆ ರಾತ್ರಿಯಿಂದ ಧೈರ್ಯ ತುಂಬಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಸ್ಥಳಾಂತರಕ್ಕೆ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್, ಸಹಾಯಕ ಆಯುಕ್ತ ಕುಮಾರನ್, ತಹಶೀಲ್ದಾರ್ ಗುರುಪ್ರಸಾದ್, ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು. ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಮೊಗವೀರಪಟ್ನ, ಖಿಲಿರಿಯಾನಗರದಲ್ಲಿ ರಾತ್ರಿ 9 ರಿಂದ ತಡರಾತ್ರಿ 3 ಗಂಟೆಯವರೆಗೆ ಅಲೆಗಳ ಅಬ್ಬರ ಹೆಚ್ಚಾಗಿತ್ತು. ತಲಪಾಡಿಯಿಂದ ಉಳ್ಳಾಲದವರೆಗೆ ಸುಮಾರು 80 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಸೋಮೇಶ್ವರ ಭಾಗದಲ್ಲಿ ಸಾಮಾನ್ಯವಾಗಿ ಮಳೆ ಸಂದರ್ಭ ಇರುವ ಕಡಲ್ಕೊರೆತದ ಪ್ರಭಾವ ಪ್ರಕೋಪದಲ್ಲಿದೆ. ಶೀಘ್ರವೇ ಕಲ್ಲುಗಳನ್ನು ಹಾಕುವ ತಾತ್ಕಾಲಿಕ ತಡೆ ಕಾಮಗಾರಿಯನ್ನು ನಡೆಸಲಾಗುವುದು. ವಿಕೋಪದ ಪ್ರಭಾವ ಇಂದು ರಾತ್ರಿ 12 ರವರೆಗೆ ಇರುವುದರಿಂದ ಸಮುದ್ರ ತೀರದವರು ಸ್ಥಳಾಂತರವಾಗಬೇಕಿದೆ ಎಂದು ಎಚ್ಚರಿಸಲಾಗಿದೆ ಎಂದು ತಹಸೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.