ಮಂಗಳೂರು, ಜ.23(DaijiworldNews/TA): ಬಿಜೈ ಕೆಎಸ್ಆರ್ಟಿಸಿ ಬಳಿ ಇರುವ ಮಸಾಜ್ ಸೆಂಟರ್ ಒಂದಕ್ಕೆ ದುಷ್ಕರ್ಮಿಗಳು ಏಕಾ ಏಕಿ ದಾಳಿ ನಡೆಸಿದ್ದು ಸೆಂಟರ್ ನಲ್ಲಿದ್ದ ಉಪಕರಣಗಳನ್ನು ಪುಡಿಮಾಡಿ ಅಟ್ಟಹಾಸ ಮೆರೆದಿದ್ದಾರೆ. ಮಸಾಜ್ ಸೆಂಟರ್ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ದಾಳಿ ಮಾಡಲಾಗಿದೆ.
ನಾಲ್ಕೈದು ಜನರ ತಂಡವೊಂದು ನಗರದಲ್ಲಿನ ಮಸಾಜ್ ಸೆಂಟರ್ ಒಂದಕ್ಕೆ ದಾಳಿ ಮಾಡಿ ಹೀನಾಯ ಕೃತ್ಯ ಎಸಗಿದ್ದಾರೆ. ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ಎಂಬ ಅಂಶ ಇನ್ನೂ ಬೆಳಕಿಗೆ ಬಂದಿಲ್ಲ. ನಗರದಲ್ಲಿನ ಕೆಲ ಪುಂಡರಿಂದ ಈ ಕೃತ್ಯ ಎಸಗಲಾಗಿದ್ದು ದ್ವೇಷದ ಕಾರಣ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ.
ದಾಳಿ ವೇಳೆ, ನಾಲ್ಕು ಜನ ಯುವತಿಯರು ಹಾಗೂ ಓರ್ವ ವ್ಯಕ್ತಿ ಸೆಲೂನ್ನಲ್ಲಿ ಇದ್ದರು. ಈ ವೇಳೆ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಪೀಠೋಪಕರಣ ಧ್ವಂಸ ಮಾಡಿದ್ದಾರೆ. ನಗರದಾದ್ಯಂತ ಇರುವ ಮಸಾಜ್ ಸೆಂಟರ್ಗಳನ್ನು ಮುಚ್ಚುವಂತೆ ದುಷ್ಕರ್ಮಿಗಳು ಆಗ್ರಹಿಸಿದ್ದಾರೆ. ಮಸಾಜ್ ಸೆಂಟರ್ಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.