ಸುಳ್ಯ, ಜ.24(DaijiworldNews/TA): ಅಯೋಧ್ಯಾ ಶ್ರೀ ರಾಮ ಪ್ರತಿಷ್ಠಾ ವಾರ್ಷಿಕೋತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡದ ವತಿಯಿಂದ ಅಯೋಧ್ಯಾ ಪ್ರಭು ಶ್ರೀರಾಮಲಲ್ಲಾ ಪ್ರತಿಷ್ಠಾ ದಿನದ ಪ್ರಯುಕ್ತ ಶ್ರೀ ರಾಮೋತ್ಸವ ಕಾರ್ಯಕ್ರಮ ಹಾಗೂ ವಿಶೇಷವಾಗಿ ಲೋಕಕಲ್ಯಾಣಾರ್ಥವಾಗಿ ಶ್ರೀ ರಾಮಚಂದ್ರ ಕಲ್ಲೋಕ್ತ ಪೂಜಾ ಕಾರ್ಯಕ್ರಮ ಜ.22 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಜರುಗಿತು.

ಪ್ರಾರ್ಥನೆ ನೆರವೇರಿಸಿ ಬಳಿಕ ಶ್ರೀ ರಾಮಜ್ಯೋತಿ ಬೆಳಗಿ ಆಕರ್ಷಕ ಕುಣಿತ ಭಜನೆಯೊಂದಿಗೆ ಪ್ರಮುಖ ರಸ್ತೆಯಲ್ಲಿ ಸಾಗಿ ಬಂತು. ರಾಘವೇಂದ್ರ ಮಠದ ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ರಾಮಜ್ಯೋತಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸಂಘಟನೆಯ ಪದಾಧಿಕಾರಿಗಳು, ರಾಮ ಮಂದಿರದ ಆಡಳಿತ ಧರ್ಮದರ್ಶಿ ಮಂಡಳಿಯ ವರು ಉಪಸ್ಥಿತರಿದ್ದರು.
ರಾಮ ದೇವರ ಭಾವಚಿತ್ರದ ಟ್ಯಾಬ್ಲೊ ಮತ್ತು ರಾಮ ಭಕ್ತರು ಮತ್ತು ಭಜಕರ ಕುಣಿತ ಭಜನೆಯೊಂದಿಗೆ ಆಕರ್ಷಕ ಮೆರವಣಿಗೆಯು ದೇವಳದ ಮುಂಭಾಗದ ತನಕ ಸಾಗಿ ಬಂತು. ರಾಮಜ್ಯೋತಿಯನ್ನು ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ರವರ ಮೂಲಕ ಹಸ್ತಾಂತರ ಮಾಡಿದ ನಂತರ ಶ್ರೀ ರಾಮಚಂದ್ರ ಕಲೋಕ್ತ ಪೂಜಾ ಕಾರ್ಯಕ್ರಮ ನಡೆಯಿತು. ಚೆನ್ನಕೇಶವ ದೇವಳದ ವಠಾತದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗುರಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಿದರು.