ಉಡುಪಿ, ಜೂ 11 (Daijiworld News/MSP): ಉಡುಪಿ ನಗರಸಭೆಯು 2012ರಲ್ಲಿಯೇ ಪ್ಲಾಸ್ಟಿಕ್ನ್ನು ನಿಷೇಧ ಜಾರಿಗೆ ತಂದರೂ, ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿಲ್ಲ. ಇದರಿಂದಾಗಿ ಪ್ರತೀ ರಸ್ತೆಗಳ ಬದಿಯಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳು ರಾಶಿ ಬೀಳುವಂತಾಗಿದೆ. ಮುಂಬೈನಂಥ ಬೃಹತ್ ನಗರದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವಾಗ ಉಡುಪಿ ನಗರಸಭೆಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪರಿಸರಪರ ಹೋರಾಟಗಾರ ರಾಯನ್ ಫೆರ್ನಾಂಡಿಸ್ ಪ್ರಶ್ನಿಸಿದ್ದಾರೆ.
ಉಡುಪಿ ಬೀಡಿನಗುಡ್ಡೆಯ ‘ಶ್ರೀ ಮುಖ್ಯಪ್ರಾಣ’ದಲ್ಲಿ ಜೂನ್ 9ರಂದು ನಡೆದ ಜನಪರ ಚಿಂತನ ವೇದಿಕೆ’ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ‘ಪ್ಲಾಸ್ಟಿಕ್ ಮತ್ತು ಪರಿಸರ’ ವಿಷಯದಲ್ಲಿ ಅವರು ಮಾತನಾಡಿದರು.
ಅತ್ಯಂತ ವಿಷಕಾರಿ ರಾಸಾಯನಿಕದಿಂದ ತಯಾರಿಸಲಾಗುವ ಪ್ಲಾಸ್ಟಿಕ್ ಅತೀ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಅಷ್ಟೇ ವೇಗವಾಗಿ ಭೂಮಿ, ನೀರು ಮತ್ತು ಗಾಳಿಯನ್ನು ಸೇರಿ ಇವುಗಳನ್ನೂ ಅತೀ ಹೆಚ್ಚು ಪ್ರಮಾಣದಲ್ಲಿ ಮಾಲಿನ್ಯ ಮಾಡುತ್ತಿದೆ. ಸುಟ್ಟರೂ ಸುಡದ, ಭೂಮಿಯೊಳಗೆ ಹೂತು ಹಾಕಿದರೂ ಕರಗದ ಪ್ಲಾಸ್ಟಿಕ್ ಕ್ಯಾನ್ಸರ್ಗೂ ಕಾರಣವಾಗುತ್ತಿದೆ. 2050ರ ಹೊತ್ತಿಗೆ ಸಮುದ್ರದಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಿ, ಮೀನಿಗಿಂತ ಪ್ಲಾಸ್ಟಿಕ್ ಸಂಖ್ಯೆ ಹೆಚ್ಚಾಗಲಿದೆ. ಪ್ಲಾಸ್ಟಿಕ್ನಿಂದಾಗಿ ಪ್ರತೀ ವರ್ಷವೂ ಲಕ್ಷಾಂತರ ಪ್ರಾಣಿ-ಪಕ್ಷಿಗಳು, ಸಮುದ್ರಜೀವಿಗಳು ಸಾಯುತ್ತಿವೆ. ಇನ್ನಾದರೂ ಸರಕಾರ ಮತ್ತು ಜನರು ಎಚ್ಚರಗೊಳ್ಳಗೊಳ್ಳಬೇಕು ಎಂದು ರಾಯನ್ ಫೆರ್ನಾಂಡಿಸ್ ಹೇಳಿದರು.
ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ಗುಜರಿ ಅಂಗಡಿಯವರು ಪ್ಲಾಸ್ಟಿಕ್ನ್ನು ತೆಗೆದುಕೊಳ್ಳದೇ ಇರುವ ಬಗ್ಗೆ, ಕರ್ನಾಟಕದಲ್ಲಿ ಪ್ಲಾಸ್ಟಿಕ್ ಮರುಬಳಕೆಗೆ ಸಂಬಂಧಿಸಿದ ಕಾರ್ಖಾನೆ ಇಲ್ಲದಿರುವ ಬಗ್ಗೆ, ನಗರಸಭೆಯ ತ್ಯಾಜ್ಯ ಸಂಗ್ರಹಿಸುವವರು ಪ್ಲಾಸ್ಟಿಕ್ನಲ್ಲಿಯೇ ತ್ಯಾಜ್ಯ ಕಟ್ಟಿಕೊಡುವಂತೆ ಕಡ್ಡಾಯ ಮಾಡುತ್ತಿರುವ ಬಗ್ಗೆ, ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಕಾರ್ಯೋನ್ಮುಖವಾಗದಿರುವುದು ಸಹಿತ ಹಲವು ವಿಷಯಗಳು ಚರ್ಚೆಗೀಡಾದವು.
ಭಾರತಿ ಎಸ್. ಕೊಡಂಕೂರು ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ಪೂಜಾರಿ ಸ್ವಾಗತಿಸಿದರು. ವಿಶ್ವನಾಥ ಪೂಜಾರಿ ಬೀಡಿನಗುಡ್ಡೆ ಅತಿಥಿಗೆ ಸ್ಮರಣಿಕೆ ನೀಡಿದರು. ಸುಮಾ ಜಿ. ಶೆಟ್ಟಿ ವಂದಿಸಿದರು. ಗಣೇಶ ರಾವ್ ಕೊರಂಗ್ರಪಾಡಿ, ಯೋಗೀಶ್ ಪೂಜಾರಿ ಕಾಡಬೆಟ್ಟು, ಜ್ಯೋತಿ ಅಂಬಲಪಾಡಿ, ಅಕ್ಷತಾ ವಿಶ್ವನಾಥ್ ಚಿಟ್ಪಾಡಿ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದ್ದರು. ಶ್ರೀರಾಮ ದಿವಾಣ ಕಾರ್ಯಕ್ರಮ ನಿರ್ವಹಿಸಿದರು.