ಉಡುಪಿ, ಜ.25 (DaijiworldNews/AA): ಐದು ವರ್ಷದ ಬಾಲಕಿಗೆ ಭಿಕ್ಷುಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಉಡುಪಿ ನಗರದ ಪಿಪಿಸಿ ಸಮೀಪದ ಓಣಿಯಲ್ಲಿ ಗುರುವಾರ ಮಧ್ಯಾಹ್ನ ವೇಳೆ ನಡೆದಿದ್ದು, ಸ್ಥಳೀಯ ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ.

ಸುಮಾರು 30 ವರ್ಷದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಆತ ಮಗುವಿಗೆ ಚಾಕಲೇಟ್ಗಳ ಆಮಿಷ ಒಡ್ಡಿ, ಹತ್ತಿರದ ಫುಟ್ಪಾತ್ಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ಘಟನೆ ನಡೆದಾಗ ಬಾಲಕಿ ತನ್ನ ಪೋಷಕರ ಅಂಗಡಿಯ ಹೊರಗೆ ಮತ್ತೊಂದು ಮಗುವಿನೊಂದಿಗೆ ಆಟವಾಡುತ್ತಿದ್ದಳು. ಆಕೆಯ ಸ್ನೇಹಿತ ಹಿಂತಿರುಗಿ ಆಕೆಯನ್ನು ಹುಡುಕಿದಾಗ ವಿಷಯ ಬೆಳಕಿಗೆ ಬಂದಿದೆ. ನಂತರ ಮಗು ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದು, ಈ ಬಗ್ಗೆ ಬಾಲಕಿಯ ಪೋಷಕರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ.
ಘಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಂಡಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಡುಪಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಘಟನೆಯ ವಿವರ ಪಡೆದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಯನ್ನು ತಕ್ಷಣ ಪತ್ತೆ ಹಚ್ಚಬೇಕು. ಜೊತೆಗೆ, ಬಾಲಕಿಗೆ ಅಗತ್ಯವಾದ ಎಲ್ಲ ನೆರವನ್ನು ನೀಡಬೇಕು. ಹಾಗೂ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸೂಚನೆ ನೀಡಿದ್ದಾರೆ.