ಮಲ್ಪೆ, ಜೂ 11 (Daijiworld News/MSP): ಬಂಟ್ವಾಳ ತಾಲೂಕಿನ ಪುದು ಗ್ರಾ.ಪಂ. ಸದಸ್ಯ ಹಾಗೂ ಮೀನಿನ ವ್ಯಾಪಾರಿ ಕೆ. ಮುಹಮ್ಮದ್(34) ಕೊಲೆಯತ್ನ ಪ್ರಕರಣದ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಫರಂಗಿಪೇಟೆಯ ಮೊಹಮ್ಮದ್ ಇಸ್ಮಾಯಿಲ್ ಸಹಿತ ಐವರನ್ನು ಉಡುಪಿ ಜಿಲ್ಲಾ ಪೊಲೀಸರು ಬೆಂಗಳೂರಿನಲ್ಲಿ ಜೂ.11 ರ ಸೋಮವಾರ ಬಂಧಿಸಿದ್ದಾರೆ. ಉಡುಪಿ ಜಿಲ್ಲಾ ಪೊಲೀಸರು ಆರೋಪಿಗಳನ್ನು ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಬಂಧನ ಮಾಡಿದ್ದು, ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಬಂಧಿತರನ್ನು ಪ್ರಕರಣದ ಸೂತ್ರಧಾರಿ ಮೊಹಮ್ಮದ್ ಇಸ್ಮಾಯಿಲ್ (45), ಆತನ ಸಹೋದರ ಮೊಹಮ್ಮದ್ ಗೌಸ್ (35), ಮೊಹಮ್ಮದ್ ಕೈಸರ್ (60), ಮುನೀದ್ (25) ಹಾಗೂ ಅನ್ಸಾರ್ (25) ಎಂದು ಗುರುತಿಸಲಾಗಿದೆ. ಈ ಪೈಕಿ ಇಸ್ಮಾಯಿಲ್, ಗೌಸ್ ಹಾಗೂ ಮುನೀದ್ ಎಂಬುವವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ರಿಯಾಝ್ನ ಗ್ರಾಮ ಪಂಚಾಯಿತಿ ಸದಸ್ಯತ್ವ ಹಾಗೂ ಹಳೆ ದ್ವೇಷದಿಂದಲೇ ಕೊಲೆಗೆ ಸುಪಾರಿ ಕೊಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಆರೋಪಿಗಳ ಬಂಧನವಾಗಬೇಕಿದ್ದು, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.