ಮಂಗಳೂರು, ಜ.26(DaijiworldNews/TA): ಚುನಾವಣೆಗಳಲ್ಲಿ ಶಿಕ್ಷಿತರು ಮತ್ತು ಶ್ರೀಮಂತರ ಪ್ರದೇಶಗಳಲ್ಲಿಯೇ ಮತದಾನ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿರುವುದು ಅವರಲ್ಲಿ ಪ್ರಜ್ಞೆ ಮತ್ತು ಬುದ್ಧಿವಂತಿಕೆ ಕೊರತೆಯ ದ್ಯೋತಕವಾಗಿದೆ. ಮತದಾನ ಮಾಡಲು ಚುನಾವಣಾ ಆಯೋಗವು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರೂ ಮತದಾನ ಮಾಡಲು ಮುಂದೆ ಬಾರದಿರುವುದು ಸಂವಿಧಾನಕ್ಕೆ ಮಾಡುವ ಅಗೌರವವಾಗಿದೆ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಹೇಳಿದ್ದಾರೆ.
ಅವರು ದ.ಕ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬಡವರು ಮತ್ತು ಅಶಿಕ್ಷಿತರ ಪ್ರದೇಶಗಳಲ್ಲಿ ಮತದಾನ ಹೆಚ್ಚಿನ ಪ್ರಮಾಣ ನಡೆಯುತ್ತದೆ. ಆದರೆ, ಶಿಕ್ಷಿತರು ಮತ್ತು ಸಿರಿವಂತರ ಪ್ರದೇಶಗಳಲ್ಲಿ ಅಂತಹ ಉತ್ಸಾಹ ಇರುವುದಿಲ್ಲ ಎಂದು ತಿಳಿಸಿದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಡಾ. ಆನಂದ್ ಅವರು ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಚುನಾವಣಾ ತಹಶೀಲ್ದಾರ್ ದಯಾನಂದ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಸ್ವಾಗತಿಸಿದರು. ಮಂಜುಳಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ನೋಂದಾಯಿಸಿದವರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.