ಉಡುಪಿ, ಜ.27 (DaijiworldNews/AA): ಇತ್ತೀಚೆಗೆ ಉಡುಪಿಯ ಪಿಪಿಸಿ ಸಮೀಪದ ಓಣಿಯಲ್ಲಿ ನಡೆದ 5 ವರ್ಷದ ಬಾಲಕಿಯ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ಆರೋಪಿಯು ಅಪರಿಚಿತನಾಗಿದ್ದರಿಂದ, ಆರೋಪಿಯ ಪತ್ತೆಗೆ ಪೊಲೀಸರ ಐದು ತಂಡಗಳನ್ನು ರಚಿಸಿದ್ದರು. ಹಲವಾರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಮಾಹಿತಿಯನ್ನು ಸಾರ್ವಜನಿಕರಿಗೂ ತಿಳಿಸಲಾಗಿತ್ತು.
ಸಾರ್ವಜನಿಕರ ಸಹಾಯ ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಪ್ರಯತ್ನದಿಂದಾಗಿ ಭಾನುವಾರ ಸಂಜೆ ಆರೋಪಿ ಬಾಗಲಕೋಟೆಯ ಹುನಗುಂದದ ಮುತ್ತು (35) ಎಂಬಾತನ್ನನು ಶ್ರೀಕೃಷ್ಣ ಮಠದ ಪರಿಸರದ ಸಮೀಪ ಪತ್ತೆ ಮಾಡಲಾಗಿದೆ.
ಘಟನೆಯ ಹಿನ್ನೆಲೆ:
ಆರೋಪಿಯು ಮಗುವಿಗೆ ಚಾಕಲೇಟ್ಗಳ ಆಮಿಷ ಒಡ್ಡಿ, ಹತ್ತಿರದ ಫುಟ್ಪಾತ್ಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಘಟನೆ ನಡೆದಾಗ ಬಾಲಕಿ ತನ್ನ ಪೋಷಕರ ಅಂಗಡಿಯ ಹೊರಗೆ ಮತ್ತೊಂದು ಮಗುವಿನೊಂದಿಗೆ ಆಟವಾಡುತ್ತಿದ್ದಳು. ಆಕೆಯ ಸ್ನೇಹಿತ ಹಿಂತಿರುಗಿ ಆಕೆಯನ್ನು ಹುಡುಕಿದಾಗ ವಿಷಯ ಬೆಳಕಿಗೆ ಬಂದಿದೆ. ನಂತರ ಮಗು ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಬಾಲಕಿಯ ಪೋಷಕರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.