ಮಂಗಳೂರು, ಜ.27 (DaijiworldNews/AA): ಜನವರಿ 26ರಂದು ಬೆಳಗ್ಗೆ ಸುಮಾರು 8.30 ರ ಸಮಯದಲ್ಲಿ, ಬೆಂಗಳೂರಿಗೆ ಇಂಡಿಗೋ ವಿಮಾನ 6E-256 ರಲ್ಲಿ ಪ್ರಯಾಣಿಸುತ್ತಿದ್ದ ರಚನಾ ಮಾರ್ಲಾ ಎಂಬ ಪ್ರಯಾಣಿಕರು ತಮ್ಮ ಮಗನ ಚಿನ್ನದ ಸರವು ವಿಮಾನ ನಿಲ್ದಾಣದಲ್ಲಿ ಕಳೆದುಹೋಗಿದೆ ಎಂದು ತಿಳಿಸಿ ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಿದ್ದರು. ದೂರು ದಾಖಲಾದಾಗ ರಚನಾ ಅವರು ಅದಾಗಲೇ ಬೆಂಗಳೂರಿಗೆ ತೆರಳಿದ್ದರು.

ವಿಮಾನ ನಿಲ್ದಾಣದ ಟರ್ಮಿನಲ್ ವ್ಯವಸ್ಥಾಪಕರು ಈ ಘಟನೆಯ ಬಗ್ಗೆ ಸಿಐಎಸ್ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಚಿನ್ನದ ಸರವು ನಗರ-ಬದಿಯ ವಾಹನ ಇಳಿಸುವ ಪ್ರದೇಶದಲ್ಲಿ ಬಿದ್ದಿರುವುದು ಕಂಡುಬಂದಿದೆ. ಬಳಿಕ ಸರವನ್ನು ಖಾಸಗಿ ವಾಹನ ಚಾಲಕನೊಬ್ಬರು ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ನಂತರ ಪೊಲೀಸರ ಸಹಾಯದಿಂದ, ವಾಹನದ ನೋಂದಣಿ ಸಂಖ್ಯೆಯ ಮೂಲಕ ಚಾಲಕನ ಸಂಪರ್ಕ ವಿವರಗಳನ್ನು ಪತ್ತೆಹಚ್ಚಲಾಯಿತು. ಚಾಲಕನನ್ನು ಸಂಪರ್ಕಿಸಿದಾಗ ಆತ ತಪ್ಪಾಗಿ ಸರವನ್ನು ತೆಗೆದುಕೊಂಡು ಹೋದಿರುವುದನ್ನು ಒಪ್ಪಿಕೊಂಡಿದ್ದು, ಅದನ್ನು ವಿಮಾನ ನಿಲ್ದಾಣಕ್ಕೆ ಹಿಂದಿರುಗಿಸುವುದಾಗಿ ತಿಳಿಸಿದ್ದಾನೆ.
ಬಳಿಕ ಸರ ಪತ್ತೆಯಾದ ಬಗ್ಗೆ ಸಿಐಎಸ್ಎಫ್ ರಚನಾಗೆ ಮಾಹಿತಿ ನೀಡಿತು. ಈ ವೇಳೆ ಅವರು ದೂರು ದಾಖಲಿಸಲು ಬಯಸುವುದಿಲ್ಲ ಆದರೆ ಸರವನ್ನು ಮಾತ್ರ ಹಿಂದಿರುಗಿ ಪಡೆಯಲು ಬಯಸುವುದಾಗಿ ತಿಳಿಸಿದ್ದಾರೆ. ಘಟನೆಯ ಕುರಿತು ಚಾಲಕನು ಲಿಖಿತ ಕ್ಷಮೆಯಾಚನೆ ಸಲ್ಲಿಸಿದನು. ಸರವನ್ನು ಸೂಕ್ತ ದಾಖಲಾತಿಗಳ ನಂತರ ಲಾಸ್ಟ್ ಅಂಡ್ ಫೌಂಡ್ ಕಚೇರಿಯಲ್ಲಿ ಸುರಕ್ಷಿತವಾಗಿ ಇರಿಸಲಾಯಿತು.
ನಂತರ, ರಚನಾ ಮಾರ್ಲಾ ಅವರ ಸಂಬಂಧಿಕರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಲಾಸ್ಟ್ ಅಂಡ್ ಫೌಂಡ್ ಕಚೇರಿಯಿಂದ ಚಿನ್ನದ ಸರವನ್ನು ಮರುಪಡೆದರು.
ಇನ್ನು ಅಧಿಕಾರಿಗಳ ತ್ವರಿತ ಮತ್ತು ದಕ್ಷ ಕ್ರಮಕ್ಕೆ ಮೆಚ್ಚುಗೆಯಾಗಿ, ಮಾರ್ಲಾ ಅವರು ವೀಡಿಯೊ ಸಂದೇಶವನ್ನು ಹಂಚಿಕೊಳ್ಳುವ ಮೂಲಕ ಸಿಐಎಸ್ಎಫ್ನ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ.