Karavali
ಮಂಗಳೂರಿನಲ್ಲಿ 300 ಕೋಟಿ ಹೂಡಿಕೆಗೆ ಜರ್ಮನಿಯ ಈಟ್ಯಾಗ್ ಕಂಪೆನಿ-ಎಸ್ಇಝೆಡ್ 'ಇಒಐ'ಗೆ ಸಹಿ
- Mon, Jan 27 2025 04:47:07 PM
-
ಮಂಗಳೂರು, ಜ.27 (DaijiworldNews/AA): ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯ "ಬ್ಯಾಕ್ ಟು ಊರು" ಭಾಗವಾಗಿ ಜರ್ಮನಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಈಟ್ಯಾಗ್ ಎನರ್ಜಿಟೆಕ್ನಿಕ್ ಪ್ರೈವೆಟ್ ಲಿಮಿಟೆಡ್ (ಯುರೋಪಿಯನ್ ಟೆಕ್ನಾಲಜಿ ಅಲೆಯೆನ್ಸ್ ಗ್ರೂಪ್) ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ 300 ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಉತ್ಪಾದನಾ ಘಟಕ ಸ್ಥಾಪಿಸುವ ಜತೆಗೆ ತನ್ನ ಜಾಗತಿಕ ಕಚೇರಿಯನ್ನೂ ಮಂಗಳೂರಿಗೆ ಸ್ಥಳಾಂತರಿಸುವುದಕ್ಕೆ ಆಸಕ್ತಿ ತೋರಿದೆ. ಈ ಹಿನ್ನಲೆಯಲ್ಲಿ ಇಂದು ಈಟ್ಯಾಗ್ ಗ್ರೂಪ್ ಹಾಗೂ ಮಂಗಳೂರು ಎಸ್ಇಝೆಡ್ ಜತೆ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ ಒಪ್ಪಂದ ಪತ್ರ(ಇಒಐ)ಕ್ಕೆ ಸಹಿ ಹಾಕಲಾಯಿತು.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಟ್ಯಾಗ್ ಕಂಪೆನಿಯ ನಿರ್ದೇಶಕ ಪ್ರಕಾಶ್ ಪಿರೇರಾ ಹಾಗೂ ಎಸ್ಇಝೆಡ್'ನ ಸಿಇಒ ಸೂರ್ಯನಾರಾಯಣ ಅವರು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಸಮ್ಮುಖದಲ್ಲಿ ಈ ಬೃಹತ್ ಮೊತ್ತದ ಬಂಡವಾಳ ಹೂಡಿಕೆಗೆ ಪೂರಕವಾದ ಒಡಂಬಡಿಕೆ(ಎಂಒಯು)ಗೆ ಪರಸ್ಪರ ಸಹಿ ಹಾಕಿದ್ದಾರೆ.
ಈ ಸಂದರ್ಭ ಮಾತನಾಡಿದ ಕ್ಯಾ. ಚೌಟ ಅವರು, ದೇಶ-ವಿದೇಶದಲ್ಲಿರುವ ಮಂಗಳೂರು ಮೂಲದ ಉದ್ಯಮಿಗಳನ್ನು ನಮ್ಮೂರಿಗೆ ಕರೆತರುವ ಭಾಗವಾಗಿ "ಬ್ಯಾಕ್ ಟು ಊರು" ಪರಿಕಲ್ಪನೆ ಆರಂಭಿಸಿದ್ದು, ಇದಕ್ಕೆ ಇಷ್ಟು ಬೇಗ ದೊಡ್ಡ ಮಟ್ಟದ ಯಶಸ್ವಿ ಸಿಗುತ್ತದೆಂದು ಭಾವಿಸಿರಲಿಲ್ಲ. 'ಬ್ಯಾಕ್ ಟು ಊರು' ಕಲ್ಪನೆಯಡಿ ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಬಂಡವಾಳ ಹೂಡಿಕೆ ಮುಂದಾಗಿರುವ ಎರಡನೇ ಕಂಪನಿ ಇದಾಗಿದೆ. ಈಟ್ಯಾಗ್ ಕಂಪೆನಿಯು ಸುಸ್ಥಿರ ಇಂಧನ ಹಾಗೂ ಇವಿ ತಂತ್ರಜ್ಞಾನ ಅಭಿವೃದ್ಧಿಗೆ ಮಂಗಳೂರಿನಲ್ಲಿ 300 ಕೋಟಿ ಬಂಡವಾಳ ಹೂಡಿಕೆ ಮಾಡುವ ಜೊತೆಗೆ ಜಾಗತಿಕ ಕಚೇರಿಯನ್ನೂ ನಮ್ಮೂರಿಗೆ ಶಿಫ್ಟ್ ಮಾಡಲು ಆಸಕ್ತಿ ತೋರಿಸಿರುವುದು ಬಹಳ ಸಂತಸ ತಂದಿದೆ. ಅಲ್ಲದೆ, ಭಾರತವನ್ನು ಸುಸ್ಥಿರ ಇಂಧನ ಉತ್ಪಾದನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ವಿಶ್ವಕ್ಕೆ ಲೀಡರನ್ನಾಗಿ ಪರಿವರ್ತಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪ್ರಯತ್ನಕ್ಕೆ ಇದು ಇನ್ನಷ್ಟು ಉತ್ತೇಜನ ನೀಡಲಿದೆ ಎಂದು ತಿಳಿಸಿದರು.
ಈ ಹೂಡಿಕೆಯು ಮಂಗಳೂರು ಬಂಡವಾಳ ಹೂಡಿಕೆ, ನಾವೀನ್ಯತೆ ಹಾಗೂ ಜಾಗತಿಕ ಪಾಲುದಾರಿಕೆಗೆ ನೆಚ್ಚಿನ ತಾಣವಾಗಿ ಬದಲಾಗುತ್ತಿರುವುದನ್ನು ಒತ್ತಿ ಹೇಳುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇಕ್-ಇನ್ ಇಂಡಿಯಾದಡಿ ಹಲವಾರು ಕಂಪನಿಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಇದೀಗ ಈಟ್ಯಾಗ್ ಕಂಪೆನಿಯು ಬ್ಯಾಕ್ ಟು ಊರಿಗೆ ಬರುತ್ತಿರುವುದು ಮೋದಿ ಅವರ ಮೇಕ್-ಇನ್ ಇಂಡಿಯಾಕ್ಕೆ 'ಕುಡ್ಲ'ದ ಕೊಡುಗೆಯಾಗಿದೆ. ಆ ಮೂಲಕ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನಾವೀನ್ಯತೆಯ ಉದ್ಯಮ ಸ್ಥಾಪಿಸುವುದಕ್ಕೆ ಮುಂದೆ ಬರುವ ಕಂಪೆನಿಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಪೂರಕ ವಾತಾವರಣವನ್ನು ಸೃಷ್ಟಿಸುವುದಕ್ಕೆ ತನ್ನ ಬದ್ಧತೆಯನ್ನು ತೋರಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
"ಬ್ಯಾಕ್ ಟು ಊರು" ಪರಿಕಲ್ಪನೆಗೆ ಹೊಸ ರೂಪ ನೀಡಿ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವುದಕ್ಕೆ ಎಲ್ಲ ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ಕೆನರಾ ಚೇಂಬರ್ ಜತೆಗೂ ಮಾತುಕತೆ ನಡೆಸಿದ್ದು, ಅವರು ಕೂಡ ಈ ಅಭಿಯಾನದಲ್ಲಿ ಕೈಜೋಡಿಸುವುದಕ್ಕೆ ಆಸಕ್ತಿ ತೋರಿಸಿದ್ದಾರೆ. ಬಜೆಟ್ ಅಧಿವೇಶ ಮುಗಿದ ಕೂಡಲೇ ಬೆಂಗಳೂರು, ಪುಣೆ, ಮುಂಬೈ ಹಾಗೂ ಗಲ್ಫ್ ದೇಶಗಳಲ್ಲಿರುವ ನಮ್ಮ ಪ್ರದೇಶದ ಉದ್ಯಮಿಗಳ ಜತೆ ಸಂಪರ್ಕ ಸಾಧಿಸಿ "ಬ್ಯಾಕ್ ಟು ಊರು" ಅಭಿಯಾನದಡಿ ಮಂಗಳೂರಿನಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸಲಾಗುವುದು ಎಂದು ಕ್ಯಾ. ಚೌಟ ಹೇಳಿದ್ದಾರೆ.
ಈಟ್ಯಾಗ್ ಕಂಪೆನಿ ನಿರ್ದೇಶಕ ಪ್ರಕಾಶ್ ಪಿರೇರಾ ಮಾತನಾಡಿ, "ನಮ್ಮ ಕಂಪೆನಿ ಮಂಗಳೂರಿನ ಎಸ್ಇಝೆಡ್ ನಲ್ಲಿ ಸುಸ್ಥಿರ ಇಂಧನ ಮತ್ತು ಇವಿ ಕ್ಷೇತ್ರಗಳಿಗೆ ಅತ್ಯಾಧುನಿಕ ಪರಿಹಾರಗಳನ್ನು ಅಭಿವೃದ್ದಿಪಡಿಸುವ ಸಂಶೋಧನೆ ಹಾಗೂ ಉತ್ಪಾದನ ಘಟಕವನ್ನು ಸ್ಥಾಪಿಸಲಿದೆ. ಮಂಗಳೂರಿನಲ್ಲಿ ಜಾಗತಿಕ ಕಚೇರಿ ಪ್ರಾರಂಭಿಸುವ ಮೂಲಕ 2026ರ ವೇಳೆಗೆ ನಮ್ಮ ಉತ್ಪಾದನಾ ಘಟಕ ಪ್ರಾರಂಭಿಸಲಾಗುವುದು. ವಾರ್ಷಿಕ 110 ಮಿಲಿಯನ್ ಡಾಲರ್ ಮೌಲ್ಯದ ಉತ್ಪನ್ನವನ್ನು ರಫ್ತು ಮಾಡುವ ಗುರಿ ಇದೆ. ಅಲ್ಲದೆ ಇಲ್ಲಿನ ಘಟಕದಲ್ಲಿ ವಿಶೇಷ ಚೇತನರಿಗೆ ಶೇ.10ರಷ್ಟು ಉದ್ಯೋಗಾವಕಾಶ ನೀಡಲಿದ್ದು, ಅದರಲ್ಲಿಯೂ ಮೂಗ-ಕಿವುಡರಿಗೆ ತರಬೇತಿ ಕೊಟ್ಟು ಉದ್ಯೋಗ ನೀಡಲಾಗುವುದು. ಮಂಗಳೂರಿನಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿದ್ದು, ಈಟ್ಯಾಗ್ ಗ್ರೂಪ್'ಗೆ ಈ ಅವಕಾಶ ಕಲ್ಪಿಸಿದ ಎಸ್ಇಝೆಡ್'ನ ಪ್ರಮುಖರು ಹಾಗೂ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ಮಾತನಾಡಿದ ಎಸ್ಇಝೆಡ್ ಸಿಇಒ ಸೂರ್ಯನಾರಾಯಣ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದು, "ಮೊದಲನೆಯ ಇಒಐ ಸಹಿ ಮಾಡಿದ ಕೆಲವೇ ವಾರಗಳಲ್ಲಿ ಇದೀಗ ಮತ್ತೊಂದು ದೊಡ್ಡ ಮಟ್ಟದ ಹೂಡಿಕೆಗೆ ಸಂಬಂಧಿಸಿದಂತೆ ಎರಡನೇ ಇಒಐಗೆ ಸಹಿ ಹಾಕುತ್ತಿದ್ದೇವೆ. ಮಂಗಳೂರಿನಲ್ಲಿ ಎಸ್ಇಝೆಡ್'ನಲ್ಲಿ ಮತ್ತಷ್ಟು ಕಂಪನಿಗಳ ಹೂಡಿಕೆ ಆಕರ್ಷಿಸಲು ಇದು ಪ್ರೇರಣೆಯಾಗಲಿದೆ ಎಂದರು.
ಈ ಸಂದರ್ಭ ಇಟಿಎಜಿ ಎನರ್ಜಿಟೆಕ್ನಿಕ್ ಸಿಇಒ ಜ್ಯೋತಿ ಪಿರೇರಾ ಎಸ್ಇಝೆಡ್ ಸಿಎಫ್ಒ ರಮೇಶ್ ಕುಮಾರ್ ಮತ್ತು ಸಿಎ ನಿತಿನ್ ಜೆ ಶೆಟ್ಟಿ ಸೇರಿದಂತೆ ಈಟ್ಯಾಗ್ ಕಂಪೆನಿಯ ಪ್ರಮುಖರು ಹಾಗೂ ಎಂಎಸ್ಇಝೆಡ್ ಅಧಿಕಾರಿಗಳು ಉಪಸ್ಥಿತರಿದ್ದರು.
In a strong boost to our efforts to bring our successful Mangaloreans “Back To Ooru” we today, have an EOI - Espression of Interest- signed between the Germany based ETAG group and the Mangalore SEZ.
— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) January 27, 2025
The Indian subsidiary of Germany based ETAG Group, ETAG Energietechnik led by… pic.twitter.com/KJ9bVP223v