ಉಳ್ಳಾಲ, ಜ.28 (DaijiworldNews/AA): ಮದುವೆ ನಿಶ್ಚಿತಾರ್ಥ ಕಾಯಕ್ರಮದಲ್ಲಿ ಬಿದ್ದು ಸಿಕ್ಕಿದ್ದ 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಅದರ ವಾರಸುದಾರರಿಗೆ ಮರಳಿಸಿ ಕುಂಬಳೆ ಸಮೀಪದ ಪುತ್ತಿಗೆಯ ಪಂಜಳ ನಿವಾಸಿ ವಿಜಯಕುಮಾರ್ ರೈ ಅವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜಯಕುಮಾರ್ ಅವರು ತಮಗೆ ಸಿಕ್ಕಿದ್ದ ಆಭರಣವನ್ನು ಹಿಡಿದುಕೊಂಡು ಅದರ ವಾರಸುದಾರರು ಬರಬಹುದು ಎಂದು ಎದುರು ನೋಡುತ್ತಾ ಕಾದಿದ್ದರು. ಬಳಿಕ ಅವರು ಅಂದುಕೊಂಡಂತೆಯೇ ತನ್ನ ಮಗುವಿನ ಆಭರಣವನ್ನು ಕಳೆದುಕೊಂಡಿರುವ ಕಿರಣ್ ಶೆಟ್ಟಿ ಅವರು ನಿಶ್ಚಿತಾರ್ಥ ನಡೆದಿದ್ದ ಸ್ಥಳಕ್ಕೆ ಆಗಮಿಸಿದ್ದಾರೆ. ಕಿರಣ್ ಹುಡುಕುವುದನ್ನು ಗಮನಿಸಿದ ವಿಜಯಕುಮಾರ್ ಅವರ ಅವರನ್ನು ವಿಚಾರಿಸಿ ಚಿನ್ನದ ಗುರುತನ್ನು ಕೇಳಿ ಅವರಿಗೆ ಹಸ್ತಾಂತರಿಸಿದ್ದಾರೆ.
ಈ ವೇಳೆ ಕಿರಣ್ ಶೆಟ್ಟಿ ಅವರು ವಿಜಯಕುಮಾರ್ ಅವರ ಫೋನ್ ನಂಬರ್ ಪಡೆದಿದ್ದರು. ಕಿರಣ್ ಶೆಟ್ಟಿ ಅವರು ತಾನು ಮಾರ್ಗದರ್ಶಕರಾಗಿರುವ ತಲಪಾಡಿ ಸಮೀಪದ ಕಿನ್ಯ ದುರ್ಗಾಪುರದ ಯುವಶಕ್ತಿಯ ಕಾರ್ಯಕ್ರಮವೊಂದರಲ್ಲಿ ವಿಜಯಕುಮಾರ್ ರೈ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.