ಕಾರ್ಕಳ, ಜೂ 11(Daijiworld News/SM): ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿ, ಜಾನುವಾರುಗಳನ್ನು ರಕ್ಷಿಸಿರುವ ಘಟನೆ ಇಲ್ಲಿನ ಅಜೆಕಾರಿನ ಕಾಡುಹೊಳೆ ಚೆಕ್ಪೋಸ್ಟ್ ಬಳಿ ನಡೆದಿದೆ.
ದಾವಣಗೆರೆ ಆಜಾದ್ನಗರದ ರಾಜಾಭಕ್ಷಿ(53), ಚಿಕ್ಕನಹಳ್ಳಿ ಹೊಸಬಡಾವಣೆಯ ಜಾಫರ್ ಸಾಧಿಕ್(26) ಹಾಗೂ ದಾವಣಗೆರೆ ರಾಮನಗರ ಬೈಪಾಸ್ ಭೀಮಾನಗರದ ಇಬ್ರಾಹಿಂ(50) ಬಂಧಿತ ಆರೋಪಿಗಳು.
ಹೆಬ್ರಿ ಮುನಿಯಾಲು ಮಾರ್ಗವಾಗಿ ಬರುತ್ತಿದ್ದ ಈಚರ್ ಗೂಡ್ಸ್ ಕಂಟೈನರ್ ವಾಹನದಲ್ಲಿ ಆರೋಪಿಗಳು ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದ್ದರು. ತಪಾಸಣೆ ವೇಳೆಯಲ್ಲಿ ವಾಹನದಲ್ಲಿದ್ದ ಚಾಲಕ ಮತ್ತು ಆರೋಪಿಗಳು ವಾಹನವನ್ನು ಬಿಟ್ಟು ಓಡಿಹೋಗಲು ಯತ್ನಿಸಿದ್ದಾರೆ.
ಈ ಸಂದರ್ಭ ಅವರನ್ನು ಹಿಡಿದು ಈಚರ್ ಗೂಡ್ಸ್ವಾಹನದ ಬೀಗ ತೆಗೆದು ಪರಿಶೀಲನೆ ನಡೆಸಿದ ವೇಳೆ 1 ಕೋಣ ಹಾಗೂ 16 ಎಮ್ಮೆಗಳು ಪತ್ತೆಯಾಗಿದೆ. ಕೋಣ ಹಾಗೂ ಎಮ್ಮೆಗಳನ್ನು ಹಿಂಸಾತ್ಮಕವಾಗಿ ಕಾಲಿಗಳನ್ನು ಕಟ್ಟಿ ವಾಹನದಲ್ಲಿ ತುಂಬಿಸಿರುವುದು ಕಂಡುಬಂದಿದೆ. ಅವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಮಾತ್ರವಲ್ಲದೇ ಮಾಂಸ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದರು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.