ಮಂಗಳೂರು, ಜ.28 (DaijiworldNews/AA): ಮೂಲ್ಕಿ ಮೂಲದ ಕ್ರಿಕೆಟಿಗ ಮನ್ಸೂರ್ ಮೂಲ್ಕಿ (41) ಅವರು ವಾಹನ ಚಲಾಯಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯದ ರಿಯಾದ್ನಲ್ಲಿ ನಡೆದಿದೆ.

ಸೌದಿ ಕಾಲಮಾನ ಸಂಜೆ 4 ಗಂಟೆಗೆ ಮನ್ಸೂರ್ ಅವರು ಕೊನೆಯುಸಿರೆಳೆದಿದ್ದಾರೆ. ಅವರು ತಾಯಿ, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮನ್ಸೂರ್ ಮೂಲ್ಕಿ ಅವರು ಮೂಲತಃ ಮೂಲ್ಕಿ ಬಪ್ಪ ಬ್ಯಾರಿ ದೊಡ್ಡಮನೆಯ ಕುಟುಂಬದವರು. ಮೂಲ್ಕಿ ಕಾರ್ನಾಡಿನ 7-ಸ್ಟಾರ್ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹಾಗೂ ಮಾನೀಷ್ ಯೂತ್ ಕ್ಲಬ್ನ ಸದಸ್ಯರಾಗಿದ್ದರು. ಅವರು ಸಾವನ್ನಪ್ಪುವ ಕೇವಲ 15 ನಿಮಿಷದ ಮುನ್ನ ಸುಮಾರು ಅರ್ಧ ಗಂಟೆಗಳ ಕಾಲ ಮೊಬೈಲ್ನಲ್ಲಿ ತಾಯಿಯೊಂದಿಗೆ ಮಾತನಾಡಿದ್ದರು ಎನ್ನಲಾಗಿದೆ.
ಇನ್ನು ಮನ್ಸೂರ್ ಮೂಲ್ಕಿ ಅವರ ಅಂತ್ಯಕ್ರಿಯೆ ಸೌದಿಯಲ್ಲೇ ನಡೆಯಲಿದೆ. ಅವರ ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ಬಾವ ಸೇರಿ 6 ಮಂದಿ ಪ್ರಯಾಣಕ್ಕೆ ಮನ್ಸೂರ್ ಅವರು ಉದ್ಯೋಗದಲ್ಲಿ ಇರುವ ಸಂಸ್ಥೆಯ ಹೆಜಮಾಡಿ ಮೂಲದ ಮಾಲಕ, ಉದ್ಯಮಿ ಸಿರಾಜ್ ಅವರು ಕುಟುಂಬದವರ ಸೌದಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದಾರೆ. ಸಿರಾಜ್ ಅವರು ಇತ್ತೀಚೆಗಷ್ಟೇ ಊರಿಗೆ ಬಂದಿದ್ದು, ವಾಪಸ್ ಸೌದಿಗೆ ತೆರಳಿದ್ದರು. 15 ವರ್ಷಗಳಿಂದ ಅವರು ಸೌದಿ ಅರೇಬಿಯಾದ ರಿಯಾದ್ನಲ್ಲಿ ಕೆಲಸ ಮಾಡುತ್ತಿದ್ದರು.