ಉಡುಪಿ, ಜೂ 11 (Daijiworld News/SM): ನಿಫಾ ವೈರಸ್ ಕುರಿತಂತೆ ಜಿಲ್ಲೆಯ ಜನತೆ ಯಾವುದೇ ರೀತಿ ಆತಂಕ ಪಡುವ ಅಗತ್ಯ ಇಲ್ಲ. ಜ್ವರ ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಮುಂಜಾಗೃತೆ ವಹಿಸುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅವರು ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿಯ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಜ್ವರ, ತಲೆನೋವು, ತಲೆ ಸುತ್ತುವಿಕೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ನಿಫಾ ವೈರಸ್ನ ಲಕ್ಷಣಗಳಾಗಿದ್ದು, ಈ ಲಕ್ಷಣಗಳು ಕಂಡು ಬಂದರೆ ಕೂಡಲೆ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಮಾರ್ಗದರ್ಶನ ಪಡೆಯುವಂತೆ ಸಲಹೆ ನೀಡಿದರು.
ನಿಫಾ ವೈರಸ್, ಬಾವಲಿ ತಿಂದು ಬಿಟ್ಟ ಹಣ್ಣುಗಳನ್ನು ಸೇವಿಸುವುದರಿಂದ ಅಥವಾ ಆ ಹಣ್ಣನ್ನು ಸೇವಿಸಿದ ಹಂದಿ ಅಥವಾ ಇತರ ಪ್ರಾಣಿಗಳಿಂದ ವೈರಸ್ ಸೋಂಕಿತ ವ್ಯಕ್ತಿಯಿಂದ ವ್ಯಕ್ತಿಗೆ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಬಾವಲಿ ಅಥವಾ ಯಾವುದೇ ಪ್ರಾಣಿ ತಿಂದು ಬಿಟ್ಟಂತಹ ಹಣ್ಣುಗಳನ್ನು ಯಾರೂ ತಿನ್ನದಂತೆ ಸೂಚನೆ ನೀಡಿದರು.
ಕೇರಳದ ಎರ್ನಾಕುಲಂನಲ್ಲಿ ಈಗಾಗಲೇ 2 ನಿಫಾ ವೈರಸ್ ಪತ್ತೆಯಾಗಿರುವ ಪ್ರಕರಣಗಳು ದಾಖಲಾಗಿದ್ದು, ಕೇರಳದಿಂದ ಬರುವಂತಹ ಪ್ರವಾಸಿಗರು, ಚಿಕಿತ್ಸೆಗಾಗಿ ಬರುವವರು, ನರ್ಸಿಂಗ್ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ವೈರಸ್ ಹರಡದಂತೆ ಹಾಗೂ ನಿಫಾ ವೈರಸ್ ಸೋಂಕಿತರಿಂದ ಇತರರಿಗೆ ಹರಡದಂತೆ ತಡೆಗಟ್ಟುವ ಸಲುವಾಗಿ ಕೆಲ ತಿಂಗಳ ಕಾಲ ಈಗಾಗಲೇ ಜಿಲ್ಲೆಯಲ್ಲಿರುವರನ್ನು ವಾಪಸ್ಸು ಹೋಗದಂತೆ ಹಾಗೂ ಅಲ್ಲಿಂದ ಯಾರೂ ಈ ಕಡೆ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನಿಫಾ ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೇ ಹೊರತು ಭಯಪಡಿಸಬಾರದು. ಬಾವಲಿ ತಿಂದ ಹಣ್ಣುಗಳಿಂದ ನಿಫಾ ವೈರಸ್ ಹರಡುತ್ತದೆ ಎಂದ ಮಾತ್ರಕ್ಕೆ ಬಾವಲಿಯನ್ನು ನಾಶ ಮಾಡುವುದು ಸರಿಯಲ್ಲ, ಬಾವಲಿಯನ್ನು ನಾಶ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.