ಮಂಗಳೂರು: ದಾಯ್ಜಿವರ್ಲ್ಡ್ ಇಂಪ್ಯಾಕ್ಟ್; ಅವ್ಯವಸ್ಥೆಯಿಂದ ಕೂಡಿದ್ದ ಕದ್ರಿ ಟಾಯ್ಲೆಟ್ ಗೆ ಕೊನೆಗೂ ಮುಕ್ತಿ
Tue, Jan 28 2025 06:29:05 PM
ಮಂಗಳೂರು, ಜ.28 (DaijiworldNews/AA): ತೀರಾ ಅವ್ಯವಸ್ಥೆಯಿಂದ ಕೂಡಿ, ಪರಿಸರದಲ್ಲಿ ರೋಗ ರುಜಿನಗಳಿಗೆ ಕಾರಣವಾಗುತ್ತಿದ್ದ ಮಂಗಳೂರು ಕದ್ರಿಯ ಸಾರ್ವಜನಿಕ ಶೌಚಾಲಯಕ್ಕೆ ಇದೀಗ ಕೊನೆಗೂ ಮುಕ್ತಿ ಲಭಿಸಿದ್ದು, ದುರವಸ್ಥೆಗೆ ಪರಿಹಾರ ಕಲ್ಪಿಸಲಾಗಿದೆ. ಈ ಹಿಂದೆ ದುರವಸ್ಥೆಯಿಂದ ಕೂಡಿದ್ದ ಶೌಚಾಲಯದ ಬಗ್ಗೆ ದಾಯ್ಜಿವರ್ಲ್ಡ್ ಸಮಗ್ರ ವರದಿ ಮಾಡಿತ್ತು.
ಸದ್ಯ ದಾಯ್ಜಿವರ್ಲ್ಡ್ ವರದಿಯ ಬೆನ್ನಲ್ಲೇ ಆಡಳಿತ ವರ್ಗ ಎಚ್ಚೆತ್ತುಕೊಂಡಿದ್ದು, ಸಮಸ್ಯೆಗೆ ಪರಿಹಾರ ಕಲ್ಪಿಸಿದೆ. ಸ್ಥಳೀಯ ಮನಪಾ ಕಾರ್ಪೋರೇಟರ್ ಮನೋಹರ್ ಕದ್ರಿ ಅವರ ಮುತುವರ್ಜಿಯಿಂದ ಸದ್ಯ ಟಾಯ್ಲೆಟ್ ಅನ್ನು ಶುಚಿಗೊಳಿಸಲಾಗಿದ್ದು, ಸಾರ್ವಜನಿಕರು ಬಳಸಲು ಯೋಗ್ಯವಾಗುವಂತೆ ಮಾಡಲಾಗಿದೆ.
ಸ್ವಚ್ಛತಾ ಕಾರ್ಯದ ನಂತರ ಕದ್ರಿಯಲ್ಲಿ ಸಾರ್ವಜನಿಕ ಶೌಚಾಲಯಗಳು ಈಗ ಉತ್ತಮ ಸ್ಥಿತಿಯಲ್ಲಿವೆ. ಸ್ಥಳೀಯರು ತ್ವರಿತ ಕ್ರಮಕ್ಕಾಗಿ ನಿಟ್ಟುಸಿರು ಬಿಟ್ಟಿದ್ದು, ಕೃತಜ್ಞತೆ ವ್ಯಕ್ತಪಡಿಸಿದೆ. ಭವಿಷ್ಯದಲ್ಲಿ ಈ ರೀತಿಯ ಪರಿಸ್ಥಿತಿಗಳನ್ನು ತಡೆಗಟ್ಟಲು ನಿಯಮಿತ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮುಂದುವರಿಯುತ್ತದೆ ಎಂಬ ನಿರೀಕ್ಷೆಯಿದೆ. ಇನ್ನು ಸಾರ್ವಜನಿಕ ಸಮಸ್ಯೆಗಳನ್ನು ಮುನ್ನಲೆಗೆ ತಂದಾಗ ಹೇಗೆ ಪರಿಣಾಮಕಾರಿಯಾಗಿ ಪರಿಹರಿಸಬಹುದು ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ.
ಕದ್ರಿ ಮೈದಾನದ ಬಳಿಯಿರುವ ಸಾರ್ವಜನಿಕ ಶೌಚಾಲಯದ ದುಃಸ್ಥಿತಿ ಕುರಿತು ಜನವರಿ 27ರಂದು ದಾಯ್ಜಿವರ್ಲ್ಡ್ ವರದಿ ಮಾಡಿತ್ತು. ವರದಿಯ ಮರುದಿನವೇ, ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗಿದೆ.
ದಾಯ್ಜಿವರ್ಲ್ಡ್ ಜೊತೆ ಮಾತನಾಡಿದ ಕಾರ್ಪೊರೇಟರ್ ಮನೋಹರ್ ಕದ್ರಿ ಅವರು, ಮಾಧ್ಯಮಗಳು ಕದ್ರಿ ಶೌಚಾಲಯದ ದುಸ್ಥಿತಿಯನ್ನು ಎತ್ತಿ ತೋರಿಸಿವೆ. ದುರದೃಷ್ಟವಶಾತ್, ಅದರ ನಿರ್ವಹಣೆಗೆ ಟೆಂಡರ್ ತೆಗೆದುಕೊಳ್ಳಲು ಯಾರೂ ಸಿದ್ಧರಿಲ್ಲ. ನಾವು ಅದನ್ನು ಸಾರ್ವಜನಿಕ ಬಳಕೆಗಾಗಿ ತೆರೆದಿದ್ದೇವೆ, ಆದರೆ ಕೆಲವು ಬಳಕೆದಾರರ ಬೇಜವಾಬ್ದಾರಿ ವರ್ತನೆಯು ಮುರಿದ ವಾಶ್ ಬೇಸಿನ್ಗಳು ಮತ್ತು ಕದ್ದ ಪೈಪ್ಗಳಂತಹ ಸಮಸ್ಯೆಗಳಿಗೆ ಕಾರಣವಾಗಿದೆ ಎಂದಿದ್ದಾರೆ.