ಕುಂಬಳೆ, ಡಿ 3: ಇಲ್ಲಿನ ಸರಕಾರಿ ಪಶು ಚಿಕಿತ್ಸಾಲಯಲ್ಲಿ ಪ್ರಾಣಿಗಳಿಗಿಂತ ಸಮಾಜಘಾತುಕ ಓಡಾಟವೇ ಜಾಸ್ತಿಯಾಗಿದೆ. ಸಂಜೆಗತ್ತಲು ಕವಿಯುತ್ತಿದ್ದಂತೆ ಮದ್ಯವ್ಯಸನಿಗಳ ಪ್ರೀಯ ಸ್ಥಳವಾಗಿ ಮಾರ್ಪಾಡಾಗುತ್ತದೆ. ಆಸ್ಪತ್ರೆಯ ಸುತ್ತುಮುತ್ತ ಕಾಡು ಪೊದೆ ತುಂಬಿಕೊಂಡಿರುವುದರಿಂದ ಇಲ್ಲಿ ಮದ್ಯಪಾನಿಗಳು, ಸಮಾಜದ್ರೋಹಿಗಳು ತಮ್ಮ ಕೃತ್ಯಗಳಲ್ಲಿ ಸುಲಭವಾಗಿ ತೊಡಗುತ್ತಾರೆ. ಈ ವಠಾರದಲ್ಲಿ ಬೀದಿ ದೀಪಗಳು ಕೆಟ್ಟು ನಿಂತಿದೆ ಇದು ಸಮಾಜಕಂಟಕರಿಗೆ ವರದಾನವಾಗಿ ಪರಿಣಮಿಸಿದೆ.
ಆಸ್ಪತ್ರೆಯ ಕಿಟಿಕಿ ಗಾಜುಗಳನ್ನು ಒಂದೊಂದಾಗಿ ಒಡೆದು ಪುಡಿಗೈಯ್ಯಲಾಗುತ್ತಿದೆ. ಇದೀಗ ಆಸ್ಪತ್ರೆಯ ಮುಂಭಾಗದ ಗೇಟ್ ನ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ. ಕಂಪ್ಯೂಟರ್ ಸಹಿತ ಅನೇಕ ಬೆಲೆಬಾಳುವ ಉಪಕರಣಗಳು ಈ ಆಸ್ಪತ್ರೆಯಲ್ಲಿವೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಆಸ್ಪತ್ರೆಯ ಒಳಗಿರುವ ಕಂಪ್ಯೂಟರ್ ಸಹಿತ ಎಲ್ಲಾ ಯಂತ್ರಗಳಿಗೂ ಸುರಕ್ಷತೆ ಇಲ್ಲ ಎಂದೇ ಹೇಳಬಹುದು.
ಈ ಮೃಗಾಸ್ಪತ್ರೆ ಪರಿಸರದಲ್ಲಿ ಪೊಲೀಸ್ ಠಾಣೆ, ಸಿಐ ಕಚೇರಿ, ಪಂಚಾಯತು ಕಚೇರಿ, ಗ್ರಾಮ ಕಚೇರಿ ಸಹಿತ ಹಲವು ಸರಕಾರಿ ಕಾರ್ಯಾಲಯಗಳು ಇದ್ರೂ ಕೂಡಾ, ಸಮಾಜದ್ರೋಹಿಗಳ ಅಟ್ಟಹಾಸ ಮಾತ್ರ ಯಾರ ಗಮನಕ್ಕೂ ಬಾರದಿರುವುದು ಅಚ್ಚರಿಗೆ ಕಾರಣವಾಗಿದೆ. ಆಸ್ಪತ್ರೆ ಕಂಪೌಂಡ್ ನ ಒಳಗೆ ಮದ್ಯ, ಮಾದಕವಸ್ತುಗಳ ಬಾಟಲಿಗಳು, ಪ್ಯಾಕೇಟ್ , ಸಿರಿಂಜ್ ಇತ್ಯಾದಿ ಪತ್ತೆಯಾಗಿವೆ.ಸಂಬಂಧಪಟ್ಟವರೂ ಇತ್ತಕಡೆ ಗಮನಹರಿಸುವುದು ಒಳಿತು.
ಸಾಂಧರ್ಬಿಕ ಚಿತ್ರ