ಮಂಗಳೂರು, ಜೂ12(Daijiworld News/SS): ಒಂದು ವೇಳೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಜಾರಿಗೆ ತಂದರೆ, ಮುಸ್ಲಿಂ ಸಮುದಾಯ ಬೆಂಬಲಿಸಲಿದೆ ಎಂದು ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್ ಅಶ್ರಫ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಸಾಗಾಟದ ಜಾನುವಾರು ಮಾಂಸ ಬಳಕೆ ಮಾಡದಂತೆ ಕಟ್ಟುನಿಟ್ಟಿನ ನಿರ್ಬಂಧ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಜಾನುವಾರು ಅಕ್ರಮ ಸಾಗಾಟಕ್ಕೆ ಅವಕಾಶ ನೀಡದಂತೆ ಫತ್ವಾ ಹೊರಡಿಸುವಂತೆ ಧಾರ್ಮಿಕ ಗುರುಗಳಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಒಂದು ವೇಳೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಜಾರಿಗೆ ತಂದರೆ, ಮುಸ್ಲಿಂ ಸಮುದಾಯ ಬೆಂಬಲಿಸಲಿದೆ. ಗೋಮಾಂಸ ಭಕ್ಷಣೆ ಮುಸ್ಲಿಂ ಸಮುದಾಯದ ಕಡ್ಡಾಯ ಆಹಾರ ಪದ್ಧತಿ ಅಲ್ಲ. ಅಕ್ರಮವಾಗಿ ಗೋಸಾಗಾಟ, ಮಾರಾಟಕ್ಕ್ಕೂ ಮುಸ್ಲಿಮರ ವಿರೋಧವಿದೆ. ಅಕ್ರಮ ಗೋಸಾಗಾಟ, ಗೋಹತ್ಯೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಮಂಗಳೂರಿನ ಕುದ್ರೋಳಿಯಲ್ಲಿ ಮಾತ್ರ ಅಧಿಕೃತ ಕಸಾಯಿಖಾನೆ ಇದೆ. ಇದರಿಂದಾಗಿ ಗೋವುಗಳ ಅಕ್ರಮ ಸಾಗಾಟ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕಲು ಪ್ರತಿ ತಾಲೂಕಿನಲ್ಲಿ ಅಧಿಕೃತ ಕಸಾಯಿಖಾನೆ ತೆರೆಯಬೇಕು. ಆಗ ಅಕ್ರಮ ಸಾಗಾಟ ಇರುವುದಿಲ್ಲ. ಕಾನೂನು ಪ್ರಕಾರ ಜಾನುವಾರು ಹತ್ಯೆಗೆ ಅವಕಾಶವಿದೆ ಎಂದು ಹೇಳಿದ್ದಾರೆ.