ಬಂಟ್ವಾಳ , ಜ.30 (DaijiworldNews/AK):ಕಲ್ಲಡ್ಕ ಪ್ಲೈ ಓವರ್ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿ ಬಹುತೇಕ ಮಾರ್ಚ್ ಅಂತ್ಯದಲ್ಲಿ ಕಂಪ್ಲೀಟ್ ಆಗಲಿದ್ದು, ಎಪ್ರಿಲ್ ನಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆಯನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಹಿಸಿಕೊಂಡ ಕೆಎನ್.ಆರ್.ಸಿ.ಕಂಪೆನಿ ತಿಳಿಸಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು.

ಅವರು ಗುರುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಜೊತೆ ಬಿ.ಸಿ.ರೋಡಿನಿಂದ ಉಪ್ಪಿನಂಗಡಿವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಕಾಂಚನದಲ್ಲಿರುವ ಕೆ.ಎನ್.ಆರ್.ಸಿ.ಕಂಪೆನಿಯ ಪ್ಲಾಂಟ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ಬಿ.ಸಿ.ರೋಡಿನಿಂದ ಪೆರಿಯಶಾಂತಿವರೆಗೆ ಸುಮಾರು 45 ಕಿ.ಮೀ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮಳೆಗಾಲದ ಮೊದಲು ಮುಗಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಭರವಸೆಯನ್ನು ಕಂಪೆನಿ ನೀಡಿದೆ. ಬ್ಲಾಸ್ಟಿಂಗ್ ಸಮಸ್ಯೆ ಇರುವ ಕಡೆ ಮಾತ್ರ ಕಾಮಗಾರಿ ತುಸು ವಿಳಂಬವಾಗಬಹುದು ಬಿಟ್ಟರೆ ಉಳಿದ ಎಲ್ಲಾ ಕಡೆ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಪ್ರಮುಖರು ವೃತ್ತದ ಸುತ್ತ ಜಾಗವನ್ನು ಅಗಲೀಕರಣಗೊಳಿಸಿ, ವೃತ್ತದ ಸೌಂದರ್ಯವನ್ನು ಇನ್ನಷ್ಟು ಹೆಚ್ಚು ಮಾಡುವಂತೆ ಮನವಿ ಮಾಡಿದರು. ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ಪೆರಮೊಗ್ರು, ಉಪ್ಪಿನಂಗಡಿ, ಸುಬ್ರಹ್ಮಣ್ಯ ಕ್ರಾಸ್ , ಕಡೆಗಳಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಹಾಗೂ ಕಲ್ಲಡ್ಕ ದಲ್ಲಿ ಅಂತಿಮ ಹಂತದಲ್ಲಿರುವ ಫ್ಲೈ ಓವರ್ ಕಾಮಗಾರಿ ವೀಕ್ಷಿಸಿದರು.