ಉಡುಪಿ, ಜ.31 (DaijiworldNews/AA): ಕುಂಭಮೇಳದ ಬಗ್ಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಈ ಹೇಳಿಕೆ ಬಾಲಿಷವಾಗಿದೆ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

ಪೆರ್ಣಂಕಿಲ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕುಂಭಮೇಳದ ಬಗ್ಗೆ ಖರ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಭಾಗಿಗಳಾಗುತ್ತಿದ್ದಾರೆ. ಇಲ್ಲಿ ಮಿಂದ ಲಕ್ಷಾಂತರ ಮಂದಿಯನ್ನು ಮೂರ್ಖರು ಎಂದು ಹೇಳಿದಂತೆ ಆಗುತ್ತದೆ ಎಂದು ಹೇಳಿದರು.
ಕುಂಭಮೇಳ ಉತ್ಸವಕ್ಕೆ ದೇಶ ವಿದೇಶಗಳಿಂದ ಜನ ಬರುತ್ತಿದ್ದಾರೆ. ಆದುದರಿಂದ ರಾಜಕೀಯ ಪಕ್ಷಗಳು ಮತಬೇಧ ಮರೆತು ಅದರ ಯಶಸ್ಸಿಗೆ ಕೈಜೋಡಿಸಬೇಕು. ಏಕ ಮನಸ್ಸಿನಿಂದ ಒಮ್ಮನಿಸ್ಸಿಂದ ಎಲ್ಲರೂ ವರ್ತನೆ ಮಾಡಬೇಕು ಎಂದು ಅವರು ತಿಳಿಸಿದರು.
ಕುಂಭಮೇಳಕ್ಕೆ ತೆರಳುವವರು ತಾಳ್ಮೆಯಿಂದ ವರ್ತಿಸಬೇಕು. ಅಲ್ಲಿ ನಡೆದ ದುರ್ಘಟನೆ ನಾವೇ ಸೃಷ್ಟಿಸಿದ ಅನಾಹುತ. ಅಲ್ಲಿ ಗೊಂದಲ ಸೃಷ್ಠಿಸಿದರೆ ನಮಗೆಯೇ ಅಪಾಯವಾಗುತ್ತದೆ. ಪ್ರಯಾಗದಲ್ಲಿ ಮಹಾಕುಂಭ ಮೇಳದಲ್ಲಿ ಭಕ್ತರಿಗೆ ಕೆಲ ಅನಾನುಕೂಲತೆ ಆಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಅಂತಹ ಯಾವುದೇ ಅನಾನುಕೂಲತೆಗಳು ಕ್ಷಿಪ್ಟರವಾಗಿ ದೂರವಾಗಿ ಎಲ್ಲಾ ಉತ್ಸವಗಳು ಸಾಂಗವಾಗಿ ನಡೆಯಲಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗುವುದು ಎಂದರು.