ಸುಳ್ಯ,ಜ.31 (DaijiworldNews/AK): : ನಗರ ಪಂಚಾಯತ್ ಸದಸ್ಯರು ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕುಡಿಯುವ ನೀರಿನ ಪೈಪ್ ಅಳವಡಿಕೆ ವೇಳೆ ಸದಸ್ಯರು ನೀಡಿದ ನಿರ್ದೇಶನಗಳನ್ನು ಅಧಿಕಾರಿಗಳು ಪಾಲಿಸಿಲ್ಲ ಎಂದು ಆರೋಪಿಸಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿ ಸಮರ್ಪಕವಾಗಿ ನಿರ್ವಹಿಸುವಂತೆ ಒತ್ತಾಯಿಸಿದ ಘಟನೆ ಸುಳ್ಯ ನ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸುಳ್ಯ ನ.ಪಂ.ಸಾಮಾನ್ಯ ಸಭೆ ನ.ಪಂ.ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಳ್ಯ ಜಾತ್ರೆ ಸಂದರ್ಭದಲ್ಲಿ ನಗರದಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆ ಕೆಲಸದ ವೇಳೆ ದೂಳು ತಡೆಗೆ ನೀರು ಹಾಕಬೇಕು, ಮತ್ತಿತರ ಸಮಸ್ಯೆಗಳ ಬಗ್ಗೆ ಕಾಮಗಾರಿ ನಿರ್ವಹಿಸುವ ಸಂಸ್ಥೆಗೆ, ಇಲಾಖೆಯ ಇಂಜೀನಿಯರ್ಗಳಿಗೆ ತಿಳಿಸಿದರೂ ಸಮರ್ಪಕವಾಗಿ ಸ್ಪಂದಿಸದೇ ನಾವು ಜನರಿಂದ ಬೈಗುಳ ಕೇಳುವಂತೆ ಮಾಡಿದ್ದಾರೆ ಎಂದು ಸದಸ್ಯರು ಸಭೆಯಲ್ಲಿ ಆರೋಪಿಸಿ ಸಭೆಯಲ್ಲಿದ್ದ ಕೆಯುಡಬ್ಯೂ÷್ಲಎಸ್ ಇಂಜೀನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಸಮಾಧಾನ ಪಡಿಸಲು ಯತ್ನಿಸಿದರೂ, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷರು, ಸದಸ್ಯರು ನಗರದಲ್ಲಿ ಕಾಮಗಾರಿ ನಿರ್ವಹಿಸುವುದನ್ನು ಸಮರ್ಪಕವಾಗಿ ನಡೆಸಿ, ಕಾಮಗಾರಿ ಯಾವ ರೀತಿ, ಯಾವ ಸಮಯದಲ್ಲಿ ನಡೆಯುತ್ತದೆ ಎಂಬ ಬಗ್ಗೆ ಯೋಜನ ವರದಿಯನ್ನು ಒಂದು ವಾರದೊಳಗೆ ನ.ಪಂ.ಗೆ ಸಲ್ಲಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿಗಳು ಒಪ್ಪಿಕೊಂಡು, ಸಮರ್ಪಕ ಕೆಲಸ ನಿರ್ವಹಿಸುವ ಭರವಸೆ ನೀಡಿದರು.