ಉಡುಪಿ, ಫೆ.02 (DaijiworldNews/AA): ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಉದ್ದೇಶಪೂರ್ವಕವಾಗಿ ರಾಜ್ಯದ ಆಡಳಿತ ಅಡ್ಡಿಪಡಿಸುತ್ತಿದೆ. ಕೇಂದ್ರ ಸರ್ಕಾರದ ಉಪಕ್ರಮಗಳನ್ನು ಜನರಿಗೆ ತಲುಪಿಸಲು ಸಹಕರಿಸಿ ಎಂದು ರಾಜ್ಯ ಸರ್ಕಾರಕ್ಕೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ನ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಜೆಟ್ನಲ್ಲಿ ಯಾವ ಅಂಶವು ರಾಜ್ಯದ ಪ್ರಗತಿಗೆ ಅಡ್ಡಿಯಾಗಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕೇಂದ್ರದ ಯೋಜನೆಗಳನ್ನು ಸಕ್ರಿಯವಾಗಿ ತಡೆಯುತ್ತಿದೆ. ಉದಾಹರಣೆಗೆ, ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಕೇಂದ್ರ ಸರ್ಕಾರವು 6,000 ರೂ. ನೀಡುತ್ತದೆ. ಆದರೆ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 4,000 ರೂ. ನೀಡುತ್ತಿತ್ತು. ಈ ಮೂಲಕ ರೈತರಿಗೆ 10,000 ದೊರೆಯುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಈ 4,000 ರೂ. ಲಾಭವನ್ನು ರದ್ದುಪಡಿಸಿತು. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಇದು ರೈತರಿಗೆ ಮಾಡುವ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಮುದ್ರಾ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಗಳಂತಹ ಇತರ ಕಲ್ಯಾಣ ಕಾರ್ಯಕ್ರಮಗಳನ್ನು ಎತ್ತಿ ಹಿಡಿದ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಸರ್ಕಾರವು ಅವುಗಳ ಸಮರ್ಪಕ ಅನುಷ್ಠಾನವನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. ಆಡಳಿತವು ಜನಕಲ್ಯಾಣಕ್ಕಿಂತ ರಾಜಕೀಯ ಹಿತಾಸಕ್ತಿಗೆ ಆದ್ಯತೆ ನೀಡಿ ರಾಜಕೀಯ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಟೀಕಿಸಿದರು.
ಮುಂದುವರೆದು, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಬದಲು ರಾಜ್ಯ ಸರ್ಕಾರ ಮೊದಲು ತನ್ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಕೇಂದ್ರದ ಯೋಜನೆಗಳು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.