ಉಡುಪಿ, ಫೆ.02(DaijiworldNews/TA): ಕರ್ನಾಟಕದಲ್ಲಿ ಯಾವುದೇ ನಕ್ಸಲ್ ಚಳುವಳಿಯ ಸದಸ್ಯರು ಸಕ್ರಿಯವಾದ ಚಳುವಳಿ ಅಥವಾ ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ. ಇಂದಿಗೆ ಕರ್ನಾಟಕ ಸಂಪೂರ್ಣವಾದ ನಕ್ಸಲ್ ಮುಕ್ತ ಎಂದು ಘೋಷಣೆ ಮಾಡಬಹುದು ಎಂದು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಕ್ಸಲ್ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಕರ್ನಾಟಕದ ಯಾವುದಾದರು ಒಂದು ಕಡೆ ವಿಶೇಷ ನ್ಯಾಯಾಲಯ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದೇವೆ. ಸದ್ಯ ಇದುವರೆಗೆ ಮುಖ್ಯವಾಹಿನಿಗೆ ಬಂದ ನಕ್ಸಲರ ಪೈಕಿ ಲಕ್ಷ್ಮೀ ವಿರುದ್ಧ ಕಡಿಮೆ ಪ್ರಕರಣವಿದ್ದು, ಕೇವಲ ಮೂರು ಕೇಸ್ ಗಳಿವೆ.
ಎಲ್ಲಾ ಮೂರು ಪ್ರಕರಣಗಳು ಕೂಡ ಕುಂದಾಪುರ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೆ ಕುಂದಾಪುರದಲ್ಲೇ ಸೆಷನ್ ಕೋರ್ಟ್ ಇರುವುದರಿಂದ ಅಲ್ಲಿಯೇ ಕಾನೂನು ಪ್ರಕ್ರಿಯೆ ನಡೆಯುತ್ತದೆ. ಕೇವಲ ಮೂರು ಪ್ರಕರಣಗಳು ಇರುವುದರಿಂದ ಬೇಗನೇ ಜಾಮೀನು ಮೂಲಕ ಹೊರಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.