ಮಂಗಳೂರು,ಫೆ.02(DaijiworldNews/TA): ಕಂಬಳ ತುಳುನಾಡಿನ ಸ್ವಾಭಿಮಾನದ ಪ್ರತೀಕ. ಮಣ್ಣಿನ ಸೊಗಡಿನ ಪರಂಪರೆಯನ್ನು ಹೊಂದಿರುವ ಕಂಬಳವನ್ನು ಮುನ್ನಡೆಸಲು ಮುಕ್ತ ಮನಸ್ಸಿನ ಪೋಷಕರು ಸದಾ ನೆರವು ನೀಡುತ್ತಿರಬೇಕು. ಯುವಕರ ಉತ್ಸಾಹ ಕಂಬಳಕ್ಕೆ ಸಂಪತ್ತಾಗಿದೆ ಎಂದು ಆಧ್ಯಾತ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ, ಅಂತಾರಾಷ್ರ್ಟೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.




ಮೂಲ್ಕಿ ಬಳಿಯ ಐಕಳದಲ್ಲಿ 49ನೇ ವರ್ಷದ ಐಕಳಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಕಂಬಳದ ಆರಂಭದಲ್ಲಿ ಐಕಳಬಾವದ ಮನೆಯಲ್ಲಿ ದೈವದ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಮೆರವಣಿಗೆಯಲ್ಲಿ ಕಂಬಳದ ಕರೆಯಲ್ಲಿ ಹಾಲು ಸುರಿದು ದೇವರ ಪ್ರಸಾದ ಹಾಕಲಾಯಿತು. ಅಶ್ವತ್ಥ ಕಟ್ಟೆಯಲ್ಲಿ ಪೂಜೆ ಸಲ್ಲಿಸಿ ಹಿಂಗಾರವನ್ನು ಅರಳಿಸಿ ಕಂಬಳಕ್ಕೆ ಚಾಲನೆ ನೀಡಲಾಯಿತು.ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಹಾ ಪೋಷಕರಾದ ಚಂದ್ರಶೇಖರ ಸ್ವಾಮೀಜಿ, ರಜನಿ ಸಿ.ಭಟ್ ಅವರನ್ನು ಗೌರವಿಸಲಾಯಿತು.
ಜಾಗತಿಕ ಬಂಟರ ಸಂಘದ ಐಕಳ ಹರೀಶ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಕಟೀಲಿನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಕಿರೆಂ ಚರ್ಚ್ ನ ಓಸ್ವಾಲ್ಡ್ ಮೊಂತೆರೊ, ಶಾರದಮ್ಮ, ರಾಹುಲ್ ಭಟ್, ವಿಶ್ವನಾಥ ಭಟ್, ಉಷಾ, ವಿಮಾನ ನಿಲ್ದಾಣದ ವಿ.ಎಂ.ಜೋಶಿ, ಅದಾನಿ ಸಂಸ್ಥೆಯ ಕಿಶೋರ್ ಆಳ್ವ, ಸೌರಭ್ ಕೃಷ್ಣ ಶೆಟ್ಟಿ, ಸೂರಜ್ ಶೆಟ್ಟಿ, ಕೆಎಂಎಫ್ ನ ಕೆ.ಪಿ.ಸುಚರಿತ ಶೆಟ್ಟಿ, ಐಕಳ ಗ್ರಾಮ ಪಂಚಾಯಿತಿಯ ದಿವಾಕರ ಚೌಟ, ಸಂತೋಷ್ಕುಮಾರ್ ಹೆಗ್ಡೆ, ಯುಗಪುರುಷದ ಭುವನಾಭಿರಾಮ ಉಡುಪ, ಸಮಿತಿಯ ಚಿತ್ತರಂಜನ್ ಭಂಡಾರಿ, ಸ್ವರಾಜ್ ಶೆಟ್ಟಿ ದೊಡ್ಡಮನೆ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕುಶಾಲ್ ಭಂಡಾರಿ ಮುಂಬೈ ಭಾಗವಹಿಸಿದ್ದರು. ಶ್ರೀ ಚಂದ್ರಶೇಖರ ಸ್ವಾಮೀಜಿ ಹಾಗೂ ರಜನಿ ಸಿ. ಭಟ್ ಅವರನ್ನು ಕಂಬಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.