ಮಂಗಳೂರು,ಜೂನ್ 12 (Daijiworld News/MSP): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಈ ಹಿಂದೆ ಜಾರಿಯಲ್ಲಿದ್ದ ರೇಷನಿಂಗ್ ಪದ್ಧತಿಯನ್ನು ಕೈ ಬಿಡುವ ಸಾಧ್ಯತೆಗಳು ಹೆಚ್ಚಾಗಿದೆ. ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ದಿನ ಕಳೆದಂತೆ ನೀರಿನ ಮಟ್ಟ ಏರುತ್ತಿದ್ದು, ಅರಬ್ಭೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ತುಂತುರು ಮಳೆಯಾಗಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ.
ತುಂಬೆ ಡ್ಯಾಮ್ನಲ್ಲಿ ನೀರಿನ ಮಟ್ಟ 2.10 ಮೀಟರ್ನಿಂದ ಮಂಗಳವಾರ ಮಧ್ಯಾಹ್ನದ ವೇಳೆಗೆ 2.15 ಮೀಟರ್ಗೆ ಹೆಚ್ಚಳವಾಗಿದೆ. ಶಂಭೂರಿನಲ್ಲಿರುವ ಎಎಂಆರ್ ಡ್ಯಾಮ್ನಿಂದ ಕೂಡ ತುಂಬೆಗೆ ನೀರು ಬಿಡಲಾಗುತ್ತಿದೆ. ಜೂನ್ 8ರಿಂದ ನಿರಂತರ ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದರೂ, ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದು ಜನರಿಗೆ ನೆಮ್ಮದಿ ತಂದಿದೆ.
ಇನ್ನು ತುಂಬೆ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಹೆಚ್ಚಳವಾದ ಪರಿಣಾಮ ಮಂಗಳೂರು ಮಹಾನಗರಪಾಲಿಕೆ ರೇಷನಿಂಗ್ ಪದ್ಧತಿಯನ್ನು ಪರಿಷ್ಕರಿಸಿದೆ. ಈ ಹಿಂದೆ ಜೂ. 6ರಿಂದ 9 ರವರೆಗೆ ನೀರು ಪೂರೈಕೆ ಸ್ಥಗಿತಗೊಳಿಸುವ ನಿರ್ಧಾರವನ್ನು ಪಾಲಿಕೆ ಕೈಗೊಂಡಿತ್ತು. ಆದರೆ ನೇತ್ರಾವತಿಯಲ್ಲಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆಯಲ್ಲಿ ರೇಶನಿಂಗ್ ಪರಿಷ್ಕರಣೆ ನಡೆಸಿ ಜೂ. 8ರಂದು ಬೆಳಗ್ಗೆ 6ರಿಂದಲೇ ನೀರು ಸರಬರಾಜು ಪ್ರಾರಂಭಿಸಿದೆ. ರೇಷನಿಂಗ್ ಪ್ರಕಾರ ಜೂನ್ 12ರಂದು ಬೆಳಗ್ಗೆ 6ರ ವರೆಗೆ 96 ತಾಸು ನಿರಂತರ ನೀರು ಸರಬರಾಜು ಇರುತ್ತದೆ. ಆದರೆ ಮಳೆಯಾಗುತ್ತಿರುವ ಕಾರಣ ರೇಶನಿಂಗ್ ಪದ್ಧತಿಯನ್ನು ಕೈಬಿಡುವ ಸಾಧ್ಯತೆ ಬಗ್ಗೆ ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ನಾರಾಯಣಪ್ಪ ಮಾಹಿತಿ ನೀಡಿದ್ದಾರೆ.